Monday, December 31, 2007

ನಗು ನೀ ನಗು...

ನನ್ನ ಅಧ್ಯಾಪನ ಜೀವನದಲ್ಲಿ ನಾನು ಗಳಿಸಿದ ಅನುಭವಾಮೃತದ ಕೆಲವು ಬಿಂದುಗಳು ನಿಮಗೆ ...ಸವಿದು ನೋಡಿ...
*******
ನಿಮ್ಮ ಪ್ರೀತಿಯ ಮುದ್ದು ಪ್ರಾಣಿ (pets) ಬಗ್ಗೆ ಪ್ರಬಂಧವೊಂದನ್ನು ಬರೆಯಿರಿ ಎಂದು ಒಮ್ಮೆ ವಿಧ್ಯಾರ್ಥಿಗಳಿಗೆ ಹೇಳೀದೆ ಬರೆದು ಮುಗಿಸಿದ ಮೇಲೆ ಒಬ್ಬೊಬ್ಬರನ್ನೇ ಓದಿ ಎಂದು ಸೂಚಿಸಿದೆ ಕೆಲವರು ಓದಿದರು ಅವರಲ್ಲಿ ಒಬ್ಬ ವಿದ್ಯಾರ್ಥಿ ಬರೆದಿದ್ದು ಹೀಗೆ;-

ಡಾಗ್ ಈಸ್ ಮೈ ಫೇವರೆಟ್ ಪೆಟ್.ಬಿಕಾಸ್ ಡಾಗ್ ಈಸ್ ಬೆಸ್ಟ್ ಫ್ರೆಂಡ್ ಆಫ್ ಮ್ಯಾನ್.ಸಮ್ ಟೈಮ್ಸ್ ಬೆಟರ್ ದ್ಯಾನ್ ಹ್ಯೂಮನ್ ಬೀಯಿಂಗ್ಸ್.ವಿಕ್ಯಾನ್ ಕ್ಲ್ಯಾಸಿಫೈ ಡಾಗ್ಸ್ ಇನ್ ಟು ಟೂ ಕಟಗರೀಸ್(categories)
೧)ಜೂಲೀ ಡಾಗ್
೨) ಕಂತ್ರೀ ಡಾಗ್

೧)ಜೂಲೀ ಡಾಗ್ -ಜೂಲೀ ಡಾಗ್ ಈಸ್ ಗುಡ್ ಡಾಗ್. ಹ್ಯಾವಿಂಗ್ ಲಾಂಗ್ ಲಾಂಗ್ ವೈಟ್ ಹೇರ್ಸ್ ಹೋಲ್ ಬಾಡಿ .ಬಟ್ ಸಮ್ ಟೈಮ್ ಬ್ಲ್ಯಾಕ್ ಹೇರ್ಸ್.ಇಟ್ ಈಸ್ ವೆರಿ ವೆರಿ ಬ್ಯೂಟಿಫುಲ್. ಬಟ್ ವೆರಿ ವೆರಿ ಕಾಸ್ಟ್ಲೀ...ಐ ಸೆಡ್ ಮೈ ಫಾದರ್`ಐ ವಾಂಟ್ ಒನ್ ಜೂಲೀ ಡಾಗ್'ಬಟ್ ಹಿ ಸೆಡ್ `ನೋ' ವೆನ್ ಐ ಗ್ರೋ ಬಿಗ್ ಅಂಡ್ ಗೆಟ್ಸ್ ಲಾಟ್ಸ್ ಆಫ್ ಮನಿ ಐ ಬೈ ಒನ್ ಜೂಲೀ ಡಾಗ್

ಕಂತ್ರೀ ಡಾಗ್-ಕಂತ್ರೀ ಡಾಗ್ ವಾಕ್ಸ್ ಅಂಡ್ ರನ್ಸ್ ಆನ್ ದ ರೋಡ್ ಕಂತ್ರೀ ಡಾಗ್ ಕಮ್ಸ್ ಇನ್ ಡಿಫರೆಂಟ್ ಕಲರ್ಸ್.ಬಟ್ ವಿತ್ ಸ್ಮಾಲ್ ಸ್ಮಾಲ್ ಹೇರ್ಸ್. ಸೋ ನಾಟ್ ಲುಕಿಂಗ್ ಗುಡ್.ಇಟ್ ಈಸ್ ಫ್ರೀ ಕಮಿಂಗ್...ಐ ಹ್ಯಾವ್ ಒನ್ ಕಂತ್ರೀ ಡಾಗ್ ಹಿಸ್ ನೇಮ್ ಈಸ್ ರಾಜ ಹಿ ಈಸ್ ನಾಟ್ ಬ್ಯಾಟಿಫುಲ್ ಬಟ್ ವೆರಿ ವೆರಿ ಗುಡ್ ಕ್ಯಾರೆಕ್ಟರ್...

ಆಹಾ... ನನ್ನ ಶಿಷ್ಯನದು ಎಂಥಾ ಸುಜ್ಞಾನ ! ನಾಯಿಗಳನ್ನು ಕ್ಲ್ಯಾಸಿಫೈ ಮಾಡಲು ಎಂಥಾ ಉತ್ತಮವಾದ ವೈಜ್ಞಾನಿಕ ವಿಧಾನ! ಅದಕ್ಕೊಪ್ಪುವಂತೆ ವಿವರಣೆ ಕೊಟ್ಟಿರುವ ಚತುರತೆ... `ಧನ್ಯಳಾದೆ' ಅಂದು ಕೊಂಡೆ

************
ಮತ್ತೊಮ್ಮೆ ವಿಧ್ಯಾರ್ಥಿಯೊಬ್ಬ ಅರಣ್ಯ ಸಂಪತ್ತಿನ ಬಗ್ಗೆ ಪ್ರಭಂದ ಬರೆಯುತ್ತಾ ಹೀಗೆ ಬರೆದಿದ್ದ...
`ದೇರ್ ಆರ್ ಹಾರ್ಡ್ ಅನಿಮಲ್ಸ್ ಅಂಡ್ ಸಾಫ್ಟ್ ಅನಿಮಲ್ಸ್ ಇನ್ ದ ಫಾರೆಸ್ಟ್
ಹಾರ್ಡ್ ಅನಿಮಲ್ಸ್ ಎಕ್ಸಾಂಪಲ್-ಲಯನ್ಸ್ ಅಂಡ್ ಟೈಗರ್ಸ್ಸ್
ಸಾಫ್ಟ್ ಅನಿಮಲ್ಸ್ ಎಕ್ಸಾಂಪಲ್-ರ್ಯಾಬಿಟ್ಸ್ ಅಂಡ್ ಡೀರ್ಸ್...
ಇದನ್ನು ಓದಿ ನಾನು ಪಿಳಿಪಿಳಿ ಕಣ್ಣು ಬಿಟ್ಟೆ
ಇನ್ನೇನು ತಾನೇ ಮಾಡಲು ಸಾಧ್ಯ?

*****************
ಮ್ಮ ಕಾಲೇಜಿನ ತಂಡ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿತ್ತು ನಮ್ಮ ಕಾಲೇಜಿನ ಕೀರ್ತಿ ಪತಾಕೆ ಹಾರಿಸಿ ಬನ್ನಿರೆಂದು ತಂಡಕ್ಕೆ ಶುಭಕೋರುವ ಪುಟ್ಟ ಸಮಾರಂಭವೊಂದನ್ನು ಪ್ರಿನ್ಸಿಪಾಲರು ಏರ್ಪಡಿಸಿದ್ದರು ಪ್ರತಿಯೊಬ್ಬ ಆಟಗಾರನೂ ತಾವುಗಳು ಚಂದ್ರಲೋಕಕ್ಕೇ ಪ್ರವಾಸ ಹೊರಟಿರುವವರಂತೆ ಬೀಗುತ್ತಾ ಅಧ್ಯಾಪಕ ವೃಂದದಿಂದ ಹಾರೈಕೆ ಗಳನ್ನು ಸ್ವೀಕರಿಸುತ್ತಾ ಇದ್ದರು ನನ್ನ ಹಾರೈಕೆ ಗೆ ಉತ್ತರವಾಗಿ ಶಿಷ್ಯನೊಬ್ಬ ತೋಳೇರಿಸುತ್ತಾ ಹೀಗೆ ಹೇಳಿದ`ನೋ ಬಡಿ ಕ್ಯಾನ್ ಟಚ್ ಅಸ್ ಮ್ಯಾಡಂ...ವಿ ಆರ್ ಅನ್ ಟಚಬಲ್ಸ್...ಯೂ ಸೀ ವಿ ವಿನ್ ದ ಕಪ್...'ಎನ್ನುತ್ತಾ ಅಷ್ಟರಲ್ಲಿ ಅಲ್ಲಿಗೆ ಬಂದ ತಮ್ಮ ತಂದೆಗೆ `ಇವರು ನಂ ಇಂಗ್ಲಿಷ್ ಮಿಸ್...' ಅಂತ ಪರಿಚಯಿಸ ತೊಡಗಿದ
` ಶಿಷ್ಯೋತ್ತಮಾ...ಅನ್ ಟಚಬಲಿಟಿ ಯಾನೇ ಅಸ್ಪೃಷ್ಯತೆ ಆಚರಿಸುವುದು ಕಾನೂನಿನ ಪ್ರಕಾರ ಅಪರಾಧವಪ್ಪಾ...ಎಂದೇನೋ ಹೇಳಹೊರಟ ನಾನು ಗಂಟಲಿನೊಳಗೇ ನನ್ನ ಮಾತು ವಾಪಸು ತುರುಕಿಕೊಂಡೆ
******************
ತಾಯಿಯ ಬಗ್ಗೆ ಎಷ್ಟು ಬಾರಿ ಎಸ್ಸೆ ಬರೆಯೋದು ಬೋರು ಮಿಸ್ ಅಂತ ಅವಲತ್ತು ಕೊಂಡ ವಿದ್ಯಾರ್ಥಿಗಳಿಗೆ ಸರಿ ಈ ಬಾರಿ ನಿಮ್ಮ ತಂದೆ ಬಗ್ಗೆ ಎಸ್ಸೆ ಬರೆಯಿರಿ ಅಂತ ಸೂಚಿಸಿದೆದೊಡ್ದ ಮನುಷ್ಯರ ಮನೆಯ ಹುಡುಗ ನನ್ನ ಶಿಷ್ಯ ತನ್ನ ಪ್ರಬಂಧದಲ್ಲಿ ಹೀಗೆ ಬರೆದಿದ್ದ`"My father is a civil serpent." ಸ್ವಂತ ತಂದೆಯನ್ನೇ ಹಾವೆಂದು ಹೀಗೆಳೆಯುವ ಇವನಿಂದನನಗೆ ಎಂಥಾ ಮರ್ಯಾದೆ ಕಾದಿರಬಹುದು ಎಂದು ಯೋಚಿಸಿದಾಗ ಬೆಚ್ಚಿ ಬೀಳುವಂತಾಗಿದ್ದು ನಿಜ

****************
ಷೇಕ್ಸ್ ಪಿಯರನ ನಾಟಕದ ತುಂಡೊಂದು ಒಮ್ಮೆ ಪಟ್ಯಭಾಗವಾಗಿತ್ತು. ಷೇಕ್ಸ್ ಪಿಯರ ನ ಬಗ್ಗೆ ಪೀಠಿಕೆಯಲ್ಲಿ ಅವನು ಸುಖಾಂತ ನಾಟಕಗಳನ್ನೂ(ಕಾಮಿಡಿ) ದುರಂತ ನಾಟಕಗಳನ್ನೂ(ಟ್ರ್ಯಾಜಿಡಿ)ಗಳನ್ನೂ ಬರೆದಿರುವುದಾಗಿ ಹೇಳಿದ್ದೆ ಹಾಗೆಯೇ ಅವನು ಬರೆದ ಐತಿಹಾಸಿಕ ನಾಟಕಗಳ(ಹಿಸ್ಟರಿ ಪ್ಲೇಸ್) ಬಗ್ಗೆಯೂ ಹೇಳಿದ್ದೆ ಪರೀಕ್ಷೆಯ ನಂತರ ಉತ್ತರ ಪತ್ರಿಕೆಗೆ ಬೆಲೆ ಕಟ್ಟುವಾಗ ನನಗೆ ಕಣ್ಣು ಕತ್ತಲೆ ಬಂತು ವಿದ್ಯಾರ್ಥಿಯೊಬ್ಬ ಬರೆದದ್ದು ಹೀಗೆ..."William Shakespeare wrote tragedies, comedies, and hysterectomies..."

**********
ಹ್ಹ...ಹ್ಹ...ಹ್ಹಾ...
ಹೀಗೇ ವರ್ಷ ಪೂರ ನಿಮ್ಮ ತುಟಿಯ ಮೇಲೆ ನಗು ನೆಲೆಸಿರಲಿ...

Tuesday, December 18, 2007

ಮಧ್ಯದವಳು

`ನೀನು ಅವಳಿಗಿನ್ನ ದೊಡ್ಡವಳು ಸ್ವಲ್ಪ ದೊಡ್ಡತನ ತೋರಿಸು...'ಈ ಮಾತು ಕಿವಿಯಲ್ಲಿ ರಿಂಗಣಿಸುತ್ತಿರಲು ಬೆಪ್ಪಾಗಿ ಕೂತಿದ್ದಳು ಸುಮಿತ್ರಾ... ವರುಷಗಳ ಹಿಂದೆ ತಮ್ಮ ಹುಟ್ಟಿದಾಗ ಅಪ್ಪ ಕೂಡಾ ಹೀಗೇ ಹೇಳಿದ್ದರಲ್ಲವಾ...ನೆನಪಿಸಿ ಕೊಂಡಳು ಅಕ್ಕ ತನ್ನನ್ನು ದಬಾಯಿಸುತ್ತಾಳೆಂದು ಚೆಂಡಾಟದಲ್ಲಿ, ಮುತ್ತು ಕವಡೆ ಆಟದಲ್ಲಿ ಕೊನೆಗೆ ಉಯ್ಯಾಲೆ ತೂಗಿಕೊಳ್ಳುವಾಗಲೂ ಗೋಳು ಹೊಯ್ದು ಕೊಳ್ಳುತ್ತಾಳೆಂದು ಅಪ್ಪನಿಗೆ ಹೇಳಿದಾಗಲೆಲ್ಲಾ `ನೀನು ಚಿಕ್ಕವಳು...ಸ್ವಲ್ಪ ಅನುಸರಿಸಿಕೊಂಡು ಹೋಗುವುದು ಕಲಿ....'ಎಂಬ ಅಪ್ಪನ ಮಾತು...
ಅದ ಕೇಳಿ ಕೇಳೀ ಸಾಕಾಗಿದ್ದವಳಿಗೆ ತಮ್ಮ ಹುಟ್ಟಿದಾಗ ತುಸು ಖುಷಿಯಾಗಿದ್ದು ಆದರೆ ತಮ್ಮನ ತಂಟೆ ತಡೆಯಲಾರದೇ ಅವನನ್ನ ಗದರಿಕೊಂಡಾಗ ಅದೇ ಅಪ್ಪ `ನೀನು ದೊಡ್ಡವಳು ಸ್ವಲ್ಪ ದೊಡ್ಡತನ ತೋರಿಸು...' ಅಂದು ಬಿಟ್ಟಿದ್ದರು! ನಾಲ್ಕರ ಬಾಲೆಗೆ ನಾನು ದೊಡ್ಡವಳೋ ಚಿಕ್ಕವಳೋ ಎಂಬ ಗೊಂದಲ... ಅಂದಿನಿಂದಾ ಅದು ತನಗೆ ಜನ್ಮಕ್ಕಂಟಿ ಬಂದಿದ್ದೋ ಎಂಬಂತೆ ಉಳಿದು ಹೋಗಿತ್ತು
ಮದುವೆಯಾಗಿ ಬಂದಾಗ ಗಂಡ`ನೀನು ಚಿಕ್ಕವಳು...ಸ್ವಲ್ಪ ಅನುಸರಿಸಿಕೊಂಡು ಹೋಗುವುದು ಕಲಿ....' ಎಂಬ ಮಾತು ಹೇಳಿದ್ದವನು ಈಗ ಹೊಸಬಳು ಬಂದಾಕ್ಷಣ ಅವಳನ್ನು ದೊಡ್ಡವಳ ಪಟ್ಟಕ್ಕೆ ಏರಿಸಿಬಿಟ್ಟಿದ್ದ...

ದಶರಥ ಪಕ್ಕದಿಂದ ಎದ್ದು ಹೋಗಿ ಬಹಳ ಹೊತ್ತಾಗಿದ್ದರೂ ಬೊಗಸೆಯಲ್ಲಿ ಮುಖ ಹಿಡಿದ ಸುಮಿತ್ರಾ ಪ್ರತಿಮೆಯಾಗಿ ಕೂತೇ ಇದ್ದಳು... ಕೆನ್ನ ಮೇಲೆ ಕಣ್ಣೀರು ಕರೆಗಟ್ಟುತ್ತಿತ್ತು...

Thursday, December 13, 2007

ಬಿಳಿನವಿಲು

ಆ ದಟ್ಟ ನೀಲಿ ರಾತ್ರಿಯಲ್ಲಿ ಕಿರು ತೊರೆಯೊಂದು ಹಾಡುತ್ತಿತ್ತು
ತೊರೆಯ ಸನಿಹವೇ ಇದ್ದರೂ ಆ ಅಮೃತ ಶಿಲೆಗೆ ತೊರೆಯ ಮೊರೆ ಕೇಳಲಿಲ್ಲ

ತೊರೆ ಹಾಡಿಯೇ ಹಾಡಿತು ಒಮ್ಮೆ ನಸುನಗುತ್ತಾ....
ಒಮ್ಮೊಮ್ಮೆ ಭಾರ ಭಾರ
ಶಿಲೆ ಒಂದಿಷ್ಟೂ ಮಿಸುಗಲಿಲ್ಲ
ಬಿಳಿಯ ಚಂದಿರ ತೊರೆಯ ಗಾನ ಕೇಳಿಯೂ ಮೌನವಾಗಿದ್ದ

ಆ ಹಾಲು ಬೆಳದಿಂಗಳಲ್ಲಿ ಬಿಳಿ ನವಿಲೊಂದು ಕನಸು ಕಂಡಿತು
ಅದರ ಕಣ್ಣಲ್ಲೇಕೋ ಕಂಬನಿ ತುಂಬಿತು

ಇತ್ತ ತೊರೆ ಹಾಡುತ್ತಲೇ ಇತ್ತು ನಿರಂತರ
ಬಿಳಿನವಿಲು ತಲೆ ಅಲುಗಿಸಿದಾಗ
ಅದರ ಕಣ್ಣಿಂದ ಉದುರಿದ ಹನಿಗಳು
ತೊರೆಯೊಳಗೆ ಬಿದ್ದು
`ನಾನಿದ್ದೇನೆ ಗೆಳತೀ...'
ಅಂದವು...

(ಸಾರಾಟೀಸ್ ಡೇಲಳ ಕವಿತೆಯೊಂದರ ಸ್ಪೂರ್ತಿಯಿಂದ)

Tuesday, December 4, 2007

ಐದು ಮಿನಿ ಮಿನಿ ಕಥೆ ಗಳು

ಹುಲ್ಲುಗರಿ ಅಳುತ್ತಿತ್ತು... ಮೋಡಕ್ಕೆ ಸಮಾಧಾನ ಹೇಳ್ತಾ...ಮೋಡ ಹಗುರಾಗುತ್ತಿತ್ತು ತನ್ನ ದುಃಖ ಹೇಳಿಕೊಳ್ತಾ...

************
ಆ ಮಗುವಿನ ಅಮ್ಮ ಕೆಲಸಕ್ಕೆ ಹೋಗಿದ್ದಳು ಮಗುವನ್ನು ನಾನು ಆಡಿಸ್ತಾ ಇದ್ದೆ ತಮಾಶಿಗೆ ಹೇಳಿದೆ`ನಾನು ಈಗ ನಿನ್ನನ್ನ ತಿಂದ್ ಬಿಡ್ತೇನೆ...'ಮಗು ಅಳುವ ದನಿಯಲ್ಲಿ ಕೇಳಿತು`ಹಾಗಾದ್ರೆ ನಮ್ಮಮ್ಮಂಗೆ ನಾನು ಬೇಡ್ ವೇ...?

************
ನೀಲಿಯೂ ,ಬೆಳಕಿನ ಕಿರಣವೂ ನೀರ ಹನಿಯೂ ಅಲ್ಲಿತ್ತು
ಅವಳ ಆಕಾಶನೀಲಿ ಕಣ್ಣು... ಅದರಲ್ಲಿ ಇಣುಕಿದ ಹನಿ ಕಣ್ಣೀರು... ಜೊತೆಗೆ ಅವಳ ಕಣ್ಣ ಮಿಂಚು
ಕಾಮನಬಿಲ್ಲು ಮಾತ್ರ ಅಳಿಸಿ ಹೋಗಿತ್ತು

**************
ಅವಳಿಗಳನ್ನು ಹೊತ್ತ ಆಕೆ ಎರಡು ಕುಲಾವಿ ಹೆಣೆದಳು
ಒಂದು ಉಳಿಯಿತು ಒಂದು ಅಳಿಯಿತು
ಎರಡೂ ಕುಲಾವಿಗಳನ್ನು ಬೀದಿ ಮಕ್ಕಳಿಗೆ ಕೊಟ್ಟು ಬಿಟ್ಟಳು

****************
ಶಿಶಿರದಲ್ಲಿ ಬಡವಾದ ಪ್ರೇಮ ವಸಂತದಲ್ಲಿ ಮತ್ತೆ ಚಿಗುರುವುದೇ..?