Wednesday, January 9, 2008

ಚಿನ್ನ-ಚೆಲುವಿ

ಸಾಲಂಕೃತರಾದ ಚೆಲುವಮ್ಮ,ಚಿನ್ನಮ್ಮ ಇಬ್ಬರನ್ನೂ ತನ್ನ ಅಣ್ಣ ಹಸೆಗೆ ಕರೆತಂದಾಗ ಸೀತಮ್ಮನ ಕಣ್ತುಂಬಿ ಬಂದಿತು ಅವರು ಎಷ್ಟು ಗದ್ಗದಿತರಾದರೆಂದರೆ ಅವರ ಅತ್ತೆ ವೆಂಕಮ್ಮನವರು `ಸೀತಾ ಆ ಹರಿವಾಣ ಇತ್ತಕೊಡು...' ಎಂದು ಮೂರನೇ
ಬಾರಿ ಕೇಳಿ ಕೊನೆಗೆ ಅವರನ್ನು ಒಮ್ಮೆ ತಿವಿದಾಗಲೇ ಈ ಪ್ರಪಂಚಕ್ಕೆ ಅವರು ಬಂದಿದ್ದು.ಅವರಿಗೆ ತಮ್ಮ ಮದುವೆಯೇ ನೆನ್ನೆ ಮೊನ್ನೆ ನಡೆದಂತೆ ನೆನಪಿದೆ ಮದುವೆಯಾದ ವರುಷದಲ್ಲೇ ಚಿನ್ನಮ್ಮ ಹುಟ್ಟಿದ್ದಳು ಮರು ವರುಷ ಚೆಲುವಮ್ಮ...ಚಿನ್ನಳಿಗೆ
ಮೊದಲಿಂದಾ ಆರೋಗ್ಯ ಕಡಿಮೆ ಎಷ್ಟೆಷ್ಟು ಏನೇನು ತಿನ್ನಿಸಿ ಮಾಡಿದರೂ ಪೀಚಾಗೇ ಇದ್ದಾಳೆ ಸದ್ಯ ಹುಡುಕಲು ಸ್ವಲ್ಪ ಕಷ್ಟವಾದರೂ ಚಿನ್ನನಿಗೆ ಒಳ್ಳೇ ಮನೆಯೇ ಸಿಕ್ಕಿತಲ್ಲಾ...ಸೀತಮ್ಮ ಉಸಿರೆಳೆದರು ಚೆಲುವಿಯ ಬಗ್ಗೆ ಅವರಿಗೆ ಯೋಚನೆಯೇ ಇಲ್ಲ
ಹುಟ್ಟುತ್ತಲೇ ಗುಂಡು ಗುಂಡಾದ ಕೆಂಪು ಮಗು ಅವಳು. ನೋಡಿದವರೆಲ್ಲಾ ಎಂಥಾ ಚೆಲುವಿನ ಮಗು ಎಂದು ಉದ್ಗಾರ ಎಳೆದು ಕೊನೆಗೆ ಅವಳ ಹೆಸರು ಚೆಲುವಮ್ಮ ಎಂದೇ ಆಗಿಹೋಗಿತ್ತು ಚಿನ್ನನಿಗೆ ಸೀತಮ್ಮನ ಮಾವನವರ ತಾಯಿ ಹೆಸರು ಇಟ್ಟಿದ್ದು
ಮೂರನೆಯವ ವೆಂಕಟೇಶನಿಗೆ ಮನೆದೇವರ ಹೆಸರು...ಪುರೋಹಿತರು ಗಟ್ಟಿ ಮೇಳ...ಗಟ್ಟಿ ಮೇಳ...ಎಂದು ಜೋರು ದನಿಯಲ್ಲಿ ಕೂಗುತ್ತಲೂ ಗಟ್ಟಿ ಮೇಳ ಭೋರ್ಗರೆದು ಅಕ್ಷತೆ ಕಾಳುಗಳ ಮಳೆ ಸುರಿದು ಚಿನ್ನ,ಚೆಲುವಿ ಇಬ್ಬರೂ ಸೌಭಾಗ್ಯವತಿಯರಾದರು


ಶ್ರೀನಿವಾಸನ ಪಕ್ಕದಲ್ಲಿ ಕೂತ ಚಿನ್ನ ಸ್ವಲ್ಪ ಸುಸ್ತಾದಂತೆ ಕಂಡಳು ಅವಳಿಗೆ ಒಂದಿಷ್ಟು ಕಲ್ಲು ಸಕ್ಕರೆ ಬೆರೆಸಿದ ಹಾಲು ತಂದು ಕೊಡಲು ನಾದಿನಿಗೆ ಹೇಳಿ ಅತ್ತ ತಿರುಗಿದವರಿಗೆ ಚೆಲುವಿಯ ಕೈಯಲ್ಲಿ ಗೋಲಿ ಕಂಡು ಕೆಂಡಾ ಮಂಡಲ ಕೋಪ ಬಂತು ಗೋಲಿ ಕೆಳಗೆ ಹಾಕು ಎಂದು ದೊಡ್ಡ ಕಣ್ಣು ಬಿಟ್ಟು ಹೆದರಿಸಿದರು ಅವಳು ಕೇಳಿದರೆ ತಾನೇ...? ಒಂದು ಕೈನಿಂದ ಅರಿಸಿನ ದಾರದಲ್ಲಿದ್ದ ಹೊಸ ತಾಳಿ ಮುಟ್ಟಿಕೊಳ್ಳುತ್ತಾ ಗೋಲಿಯನ್ನು ಇನ್ನೊಂದು ಮುಷ್ಟಿಯಲ್ಲಿ ಬಿಗಿಯಾಗಿ ಮುಚ್ಚಿಕೊಂಡಳು! ಪುರೋಹಿತರುಇಗೋ...ಈ ಹೂ ಹಿಡಿ...' ಅಂತ ಒಂದಿಷ್ಟು ಹೂ ಕೊಟ್ಟಾಗ ಗೋಲಿ ಚೆಲುವಿಯ ಮಡಿಲು ಸೇರಿತು ಮತ್ಯಾಕೋ ಸರಿ ಬರಲಿಲ್ಲ ಎಂದುಕೊಂಡು ಪುರೋಹಿತರು ಕೊಟ್ಟ ಅಷ್ಟೂ ಹೂ ಒಂದು ಕೈಯಲ್ಲಿ ಕಿವಿಚಿ ಹಿಡಿದು ಅತ್ತಿತ್ತ ನೋಡಿ ಕಲಶದ ದಿಕ್ಕಿನಲ್ಲಿ ಎಸೆದು ಬಿಟ್ಟು ಇನ್ನೊಂದು ಕೈನಿಂದ ಗೋಲಿಯನ್ನು ಬಾಯೊಳಗೆ ಸೇರಿಸಿಕೊಂಡು ಕೆನ್ನೆಯೊಳಗೆ ಒತ್ತರಿಸಿ ಕೊಂಡಳು ಮಗಳ ಈ ಅವಾಂತರವನ್ನು ಕೊನೆಗಣ್ಣಿನಲ್ಲಿ ನೋಡುತ್ತಿದ್ದ ಸೀತಮ್ಮ ಹಣೆ ಹಣೆ ಚಚ್ಚಿಕೊಂಡರು

ಅಂತೂ ಅವತ್ತಿಗೆ ನಿಗದಿಯಾದ ಕಾರ್ಯಕ್ರಮ ಮುಗಿಯಿತು ಆಗಲೇ ಎಲೆ ಹಾಕಲು ಶುರು ಮಾಡಿದ್ದರು.ಬೀಗರೆಲ್ಲರನ್ನೂ ಆಹ್ವಾನಿಸಲೆಂದು ಸೀತಮ್ಮ ಕುಂಕುಮ ಅಕ್ಷತೆಯೊಂದಿಗೆ ಹೊರಟರು.