ಒಂದೆರಡು ದಿನ ಸುಮ್ಮನೇ ಅಮ್ಮನ ಜೊತೆ ಕಳೆದೆ
ಮಕ್ಕಳು ಅಜ್ಜನ ಜೊತೆಯಲ್ಲಿ ಓಡಾಡಿಕೊಂಡು ಇದ್ದರು
ಮನಸ್ಸು ಸ್ವಲ್ಪ ಶಾಂತವಾದ ಮೇಲೆ ಮುಂದಿನ ಯೋಚನೆ ಮಾಡತೊಡಗಿದೆ
ಮನೆಗಾಗಿ ನಾನು ತೊಗೊಂಡಿದ್ದ ಇನ್ಸೂರೆನ್ಸ್ ನಿಂದ ಎಷ್ಟು ಹಣ ಬರುತ್ತೆ ಅಂತ ನೋಡಬೇಕಿತ್ತು
ಮಾರನೇ ದಿನ ಇನ್ಸೂರೆನ್ಸ್ ಕಂಪನಿಯ ಆಫೀಸಿಗೆ ಹೋಗಿ ವಿಚಾರಿಸಿ ಹಣ ಪಡೇಯಲು ಅಗತ್ಯವಾದ ಪೇಪರ್ ವರ್ಕ್ ಮಾಡಿ ಬಂದೆ ವಾಪಸ್ಸು ಬರುವಾಗ ಯಾಕೋ ಅಜ್ಜಿಯನ್ನು ನೋಡಬೇಕೆನ್ನಿಸಿತು ಆದರೆ ವಿಸಿಟರ್ ಅವರ್ಸ್ ಮೀರಿ ಹೋಗಿದ್ದರಿಂದ
ಅವತ್ತು ಹೋಗುವಂತಿರಲಿಲ್ಲ ಮನೆಗೆ ಬಂದ ಮೇಲೆ ಅಜ್ಜಿ ಇದ್ದ ಹಾಸ್ಪೈಸ್ ಗೆ ಕಾಲ್ ಮಾಡಿ ಅಪಾಯಿಂಟ್ಮೆಂಟ್ ತೊಗೊಂಡೆ
ಮರು ದಿನ ನಾನು ಅಮ್ಮ ಅಜ್ಜಿನ ನೋಡಲು ಹೋದೆವು
**********
ಅಜ್ಜಿ ನಾನು ಈಗ್ಗೆ ಹದಿನೈದು ದಿಸಗಳ ಹಿಂದೆ ನೋಡಿದ್ದಕ್ಕಿಂಥ ಬಡವಾಗಿ ಕಂಡಳು
ಆದರೆ ಮಾತಿಗೇನೂ ಕಡಿಮೆ ಇರಲಿಲ್ಲ
ಸುಕ್ಕಾದ ತನ್ನ ಮೆತ್ತಗಿನ ಅಂಗೈ ಒಳಗೆ ನನ್ನ ಕೈ ಹಿಡಿದು ಕೂತಳು
"ಜೇಮ್ಸ್ ಬರಲಿಲ್ಲವೇ" ಅಂತ ಅಮ್ಮನನ್ನು ಕೇಳಿ ತನ್ನ ಮಗನ ಆರೋಗ್ಯ ವಿಚಾರಿಸಿಕೊಂಡಳು
ಅಮ್ಮ ತಾನು ಮಾಡಿದ್ದ ಸ್ಕಾರ್ಫ್ ಕೊಟ್ಟಾಗ ನಿನಗೇ ಕಣ್ಣು ಕಾಣುವುದಿಲ್ಲ ಇದನ್ನೆಲ್ಲಾ ಯಾಕೆ ಮಾಡುತ್ತೀ ಅಂತ ಹುಸಿ ಮುನಿಸು ತೋರಿದರೂ ಕೊರಳ ಸುತ್ತ ಸ್ಕಾರ್ಫ್ ಸುತ್ತಿಕೊಂಡು ಮಿರರ್ ತಂದು ತೋರಿಸುವಂತೆ ನನ್ನನ್ನು ಕೇಳಿ ಕನ್ನಡಿಯಲ್ಲಿ ನೋಡಿಕೊಂಡು ಖುಷಿ ಪಟ್ಟಳು
ಲೀ ಮತ್ತು ಜೇ ಬಗ್ಗೆ ವಿಚಾರಿಸಿದಳು ಇವುಗಳೆಲ್ಲದರ ಮದ್ಯೆಯೇ ನರ್ಸ್ ಬಂದು ಇಂಜಕ್ಷನ್ ಚುಚ್ಚಿ ಹೋದಳು
ಅವಳನ್ನು ಅಜ್ಜಿ ಬ್ರೆಂಡಾ ಬಂದಿದ್ದರೆ ನಾನು ಕರೆದೆ ಅಂತ ಕಳುಹಿಸು ಅಂತ ಕ್ವೀನ್ ವಿಕ್ಟೋರಿಯಾ ಸ್ಟೈಲ್ ನಲ್ಲಿ ಆಜ್ಞಾಪಿಸಿದ್ದು ನೋಡಿ ನಮಗಿಬ್ಬರಿಗೂ ತಡೆಯಲಾರದಷ್ಟು ನಗು
ನಾನು ನಗುತ್ತಾ ಮಾತಾಡುತ್ತಿರುವಾಗ ಒಳಬಂದ ಬ್ರೆಂಡಾ 'ಓ ಯುವರ್ ಗ್ರ್ಯಾಂಡ್ ಡಾಟರ್ ಈಸ್ ಆಲ್ರೆಡಿ ಹಿಯರ್.."ಎನ್ನುತ್ತಾತನ್ನ ಕೈಲಿದ್ದ ಕುಂಡವೊಂದನ್ನು ಪಕ್ಕದ ಸ್ಟೂಲಿನ ಮೇಲಿಟ್ಟು ಅಜ್ಜಿಗೆ ಮುತ್ತಿಟ್ಟು`ಸೀಯೂ ಆಫ್ಟರ್ ಮೈ ಶಿಫ್ಟ್' ಎನ್ನುತ್ತಾ ಹೊರಹೋದಳು
ಅಜ್ಜಿ ತನ್ನ ಜೀರ್ಣವಾದ ಹಸ್ತಗಳಲ್ಲಿ ಆ ಪುಟಾಣಿ ಕುಂಡವನ್ನು ನನ್ನ ಕೈಗಿಡುತ್ತಾ 'ಟೇಕ್ ಕರೇಜ್ ಹನಿ.." ಎಂದಾಗ ನಮ್ಮಿಬ್ಬರ ಕಣ್ಣಲ್ಲೂ ನೀರು...ಅಜ್ಜಿ ಮಾತ್ರ ತನ್ನ ಕಣ್ಣಲ್ಲಿ ಎರಡು ಹನಿ, ತುಟಿಯಲ್ಲಿ ಎಂದಿನ ನಸುನಗುವಿನಿಂದಾಗಿ ಸುಂದರ ಮಳೆಬಿಲ್ಲಿನಂತೆ ಕಂಡಳು
ನಾನು ನನ್ನ ಎರಡೂ ಕೈಗಳಲ್ಲಿ ಹಿಡಿದಿದ್ದ ಆ ಕುಂಡದಲ್ಲಿ ಕಡುಗೆಂಪು ಜೆರೇನಿಯಂ ಹೊರವಾಗಿ ಅರಳಿತ್ತು...
**************
ಸುಮಾರು ಎರಡು ತಿಂಗಳ ನಂತರ ಹೊಸ ಮನೆ ಕೊಂಡೆವು ಇದು ಹಳೆ ಮನೆಗೆ ಹೋಲಿಸಿದರೆ ಪುಟ್ಟಮನೆ
ಆದರೆ ಈ ಮನೆಯಲ್ಲಿ ಬೇಸ್ಮೆಂಟ್ ಇದೆ ಸಿಂಗಲ್ ಮಾಮ್ ಆದ ನನ್ನ ಶಕ್ತಿ ಇಷ್ಟೇ ಅಂತ ಮಕ್ಕಳಿಗೆ ಒಪ್ಪಿಸಿದ್ದಾಯಿತು
ಜೇ ಸುಲಭದಲ್ಲಿ ಅರ್ಥ ಮಾಡಿಕೊಂಡ ಲೀ ಗೆ ಸ್ವಲ್ಪ ಸಮಯ ಬೇಕಾಯಿತು
ಇರುವ ದುಡ್ಡನ್ನೆಲ್ಲಾ ಮನೆಗೇ ಹಾಕಿಬಿಟ್ಟರೆ ಜೇಯ ಕಾಲೇಜಿಗೆ ಏನು ಮಾಡುವುದು ಎಂದು ನನ್ನ ಯೋಚನೆ...
ಹೊಸ ಮನೆಯಲ್ಲಿ ಎಲ್ಲವೂ ಹೊಸದು!
ಆದರೆ ಇದು ಯಾವುದೂ ನಮ್ಮದಲ್ಲ ಅಂತ ಹೆಜ್ಜೆ ಹೆಜ್ಜೆಗೂ ಅನ್ನಿಸುತ್ತಿತ್ತು
ಬಿಲೀವ್ ಮೀ...ನಾವುಗಳು ಯಾವಾಗಲೂ ಅಯ್ಯೋ ಈ ಸಾಮಾನು ಹಳೆದಾಯಿತು ಹೊಸದು ತೊಗೋಬೇಕು...ಇದು ಸ್ವಲ್ಪ ಮುರಿದು ಹೋಗಿದೆ ಹೊಸದು ತೊಗೋಬೇಕು...ಇದು ಹಳೆ ಮಾಡಲ್ಲು ಈಗ ಬಂದಿರುವ ಹೊಸದು ತುಂಬಾ ಚೆನ್ನಾಗಿದೆಯಂತೆ ತೊಗೋಬೇಕು...ಅಂತ ಯಾವಾಗಲೂ ಹೊಸ ಹೊಸ ಸಾಮಾನಿನ ಕನಸು ಕಾಣುತ್ತಿರುತ್ತೀವಲ್ಲಾ..ನಾವಂದುಕೊಂದಷ್ಟು ಸುಲಭವಲ್ಲ ಬರೀ"ಹೊಸ"ಸಾಮಾನಿನ ಮದ್ಯೆ ಬದುಕುವುದು
ವರ್ಷಾನುಗಟ್ಟಲೆ ನಮ್ಮ ಜೊತೆ ಇದ್ದು ನಮ್ಮ ಕೈ ಗುರುತು ಮೂಡಿಸಿಕೊಂಡ ಆ ಬಣ್ಣ ಮಾಸಲಾದ ಸಾಮಾನುಗಳು ಕೊಡುವ ಸೆಕ್ಯೂರಿಟಿಯನ್ನು ನೆಮ್ಮದಿಯನ್ನು ಹೊಸ ಸಾಮಾಸು ಕೊಡಲಾರದು ಅಮ್ಮ ಕೊಟ್ಟ ಕುಕಿಂಗ್ ಪಾಟ್ ಗಳು,ಅಕ್ಕ ಕೊಟ್ಟ ಕ್ಯಾರೆಟ್ ಪೀಲರ್,ಅಣ್ಣನಿಂದ ಬಂದ ಕ್ರಿಸ್ಮಸ್ ಗಿಫ್ಟ್, ಅಜ್ಜಿ ಕೊಟ್ಟ ಪುಟಾಣಿ ಹ್ಯಾಂಡ್ ಮಿರರ್,ತಂಗಿ ಕೊಟ್ಟ ಪುಟಾಣಿ ಓಲೆಗಳು... ಹೀಗೆ ನಿಮಗೆಂದೇ ಕೊಂಡು ಕೊಟ್ಟವುಗಳು,ನಿಮಗಾಗಿ ಅಂತಲೇ ಯಾರೋ ತಮ್ಮ ಬಿಡುವಿನ ವಿಶ್ರಾಂತಿಯ ನಿಮಿಷಗಳನ್ನು ಬಸಿದು ಕೈಯಿಂದ ಮಾಡಿದವು,ನಿಮ್ಮ ಇಪ್ಪತ್ತನೇ ಬರ್ತ್ ಡೇ ನೆನಪು ತರುವ ಆ ಉಡುಗೊರೆ...
ಇವುಗಳು,ಇವುಗಳು ಮಾತ್ರವೇ ತರುವ ಆ ನಸು ನಗುವನ್ನು ಆಕ್ಷಣದ ನೆನಪು ತರುವ ಸುಖವನ್ನು ಹೊಸ ಸಾಮಾಸು ಹೇಗೆ ತಂದೀತು ಹೇಳಿ...
ಆದರೆ ಈ ಎಲ್ಲಾ ನೆನಪು ತರುವ ಆ ಚಿಕ್ಕ ಚಿಕ್ಕ ಸಾಮಾಸುಗಳನ್ನೂ tornado ನಮ್ಮಿಂದ ಕಸಿದುಕೊಂಡು ಬಿಟ್ಟಿತು
ನನ್ನ ಬೆರಳು ತುದಿಯಿಂದ ಮತ್ತೆ ಆ ಕೆಲವು ಸಾಮಾನುಗಳನ್ನು ಮುಟ್ಟಲಾಗುವಂತಿದ್ದರೇ ...ಎಂದು ಹಂಬಲಿಸುವಂತಾಗುತ್ತದೆ ಅದು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ...
**************
ಹೊಸ ಮನೆಗೆ ಬಂದು ಮೂರು ತಿಂಗಳಾಗಿದೆ
ನಿಧಾನವಾಗಿ ಇದು ನಮ್ಮ ಮನೆ ಅಂತ ಅನ್ನಿಸುತ್ತಿದೆ
ಹೊಸ ಸಾಮಾನುಗಳೆಲ್ಲಾ ಹೊಳಪು ಕಳೆದುಕೊಂಡು ಸ್ವಲ್ಪ ಮಾಸಲಾಗಿರುವುದರಿಂದ " ನಮ್ಮದು" ಅನ್ನಿಸುತ್ತಿದೆ
ನಾವು ಮೂರು ಜನರೂ ಹಿಂದಿಗಿಂತಲೂ ಹೆಚ್ಚು ಸಮಯವನ್ನು ಜೊತೆಗೆ ಕಳೆಯುತ್ತೇವೆ
tornado ಬಗ್ಗೆಯಾಗಲೀ ನಾವು ಕಳೆದುಕೊಡಿದ್ದರ ಬಗ್ಗೆಯಾಗಲೀ ನಾವ್ಯಾರೂ ಮಾತಾಡುವುದಿಲ್ಲ
**************
ಇವತ್ತು ಮಾರ್ಟಿನಾ ಜಾನ್ ಮಗುವಿನೊಂದಿಗೆ ನಮ್ಮ ಮನೆಗೆ ಬರುತ್ತಿದ್ದಾರೆ
ಲೀ ಗೆ ಸಂಭ್ರಮವೋ ಸಂಭ್ರಮ
ಔತಣದ ಅಡುಗೆ ಮಾಡಲು ಅಮ್ಮ ನಮ್ಮ ಮನೆಗೆ ಬಂದಿದ್ದಾಳೆ
ಜೇ ಅಪ್ಪನೊಂದಿಗೆ ಬಲೂನುಗಳನ್ನು ತೂಗಿ ಬಿಡುತ್ತಿದ್ದಾನೆ
ಲೀ ಸುಮ್ಮನೇ ಅತ್ತಿಂದಿತ್ತ ಓಡಾಡುತ್ತಾ ಕುಣಿಯುತ್ತಿದ್ದಾನೆ
ಖುಷಿಯ ಸಮಾಚಾರವೆಂದರೆ ಮಾರ್ಟಿನಾ ಮತ್ತು ಜಾನ್ ಬರುವ ಡಿಸಂಬರ್ ಹಾಲಿಡೇಸ್ ನಲ್ಲಿ ಮದುವೆ ಯಾಗುತ್ತಿದ್ದಾರೆ
ಇನ್ನೊಂದು ಖುಷಿಯ ವಿಷಯವೆಂದರೆ ಅವಳ ಮೆಡಿಕಲ್ ಎಕ್ಸ್ಪೆಸ್ ಎಲ್ಲಾ ನಚ್ಯುರಲ್ ಕೆಲಾಮಿಟಿ ರಿಲೀಫ್ ಫಂಡ್ ನಿಂದ ಕವರ್ ಆಗಿದ್ದು
ಮದುವೆಯಲ್ಲಿ ನೀನೇ ಬ್ರೈಡ್ಸ್ ಮೇಡ್ ಆಗಬೇಕೆಂದು ಮಾರ್ಟೀನಾ ನನಗೆ ಹೇಳುತ್ತಿದ್ದಾಳೆ
***************
ನಾವೆಲ್ಲಾ ನಿರೀಕ್ಷಿಸಿದ ಹೊತ್ತಿಗೆ ಮಾರ್ಟೀನಾ ಜಾನ್ ಮಗುವಿನೊಂದಿಗೆ ಬಂದಿಳಿದರು
ಐದು ತಿಂಗಳ Mira bai ಚಬ್ಬಿ ಚಬ್ಬಿಯಾಗಿ ಮುದ್ದಾಗಿತ್ತು
ಲೀ ಗೆ ಬೇಬಿಯನ್ನು ಮುಟ್ಟಲು ಆಸೆ ಅವನ ಕೈ ಸ್ಯಾನಿಟೈಸ್ ಮಾಡಿ ಮಾರ್ಟೀನ Mira baiಯ ಕೆನ್ನೆ ಸವರಲು ಬಿಟ್ಟಳು
ಗುಲಾಬಿ ಕೆನ್ನೆಯ ನೀಲಿ ಕಣ್ಣಿನ Mira bai ಲೀಯನ್ನು ನೋಡಿ ಕಿಲ ಕಿಲ ನಗುತ್ತಿರುವಾಗ ಇದೇನು ಹೆಸರು Mira bai? ಅಂತ ಲೀ ಕೇಳಿದ ಅಮ್ಮನೂ ದನಿ ಗೂಡಿಸಿದಳು
ಜಾನ್ ಹೇಳಿದ ನಾವಿಬ್ಬರೂ ಗಂಡು ಮಗುವಾದರೆ Saint Mark ನ ಸ್ಮರೆಣೆಗೆ ಅವನಿಗೆ Mark ಅಂತ ಇಡೋಣವೆಂದು ಕೊಂಡಿದ್ದೆವು ನಮಗೆ ಮಗಳು ಹುಟ್ಟುವಳೆಂದು ಗೊತ್ತಾದ ದಿನಂದಿಂದ M ನಿಂದ ಪ್ರಾರಂಭವಾಗುವ Saint ಒಬ್ಬಳ ಹೆಸರು ಹುಡುಕುತ್ತಿದ್ದೆ ಅಕಸ್ಮಾತ್ Indian Saint ಆದ Mira bai ಯ ಗೀತೆಗಳ ಒಂದು ಪುಸ್ತಕ ಓದಿ ತುಂಬಾ ಪ್ರಭಾವಿತನಾದೆ Mira bai ಹಿಂದೂ ದೇವನಾದ Lord Krishna ನ ಬಗ್ಗೆ ತುಂಬಾ ಮಧುರವಾದ ಗೀತೆಗಳನ್ನು ಬರೆದಿದ್ದಾಳೆ ಮಾರ್ಟೀನಾಗೂ ಅವಳ ಗೀತೆಗಳು ತುಂಬಾ ಇಷ್ಟವಾದವು ಮತ್ತು ಅಂದೇ ನಮ್ಮ ಮಗಳಿಗೆ ಈ ಹೆಸರು ಇಡಲು ನಿರ್ಧರಿಸಿದೆವು...
ನನ್ನ ಅಂಗಳದಲ್ಲಿ ಅಜ್ಜಿ ಕೊಟ್ಟ ಕೆಂಪು ಜೆರೇನಿಯಂ ಅರಳಿ ನಗುತ್ತಿತ್ತು
ಮಾರ್ಟೀನಾಳ ಮಡಿಲಿನಲ್ಲಿ Mira bai ನಸುನಗುತ್ತಿದ್ದಳು
ನಾನು ಮನದಲ್ಲೇ ನುಡಿದೆ 'ಆಮೆನ್...'
(ಮುಗಿಯಿತು)
***************
ಧನ್ಯವಾದಗಳು...ಹದಿನೈದು ಕಂತು ಸಹನೆಯಿಂದ ಓದಿದ ನಿಮಗೆ....
ಮಧ್ಯಾನ್ಹ ಮಲಗಿ ಅಮ್ಮನಿಗೆ ಆ ಆ ವಾರದ ಕಥೆ ಬರೆಯಲು ಬಿಡುವು ಕೊಟ್ಟ ಮಗು ಕಿಟ್ಟಣ್ಣನಿಗೆ,
ಬರಿ ಬರಿ ಅಂತ ಪ್ರೋತ್ಸಾಹಿಸಿದ, ಕಮೆಂಟ್ ಹಾಕಿದ ಜ್ಯೋತಿ ,ಶಾಂತಲಾ ,ತೇಜಸ್ವಿನಿ,ಮೀರಾ
ಮತ್ತು ಮಹಂತೇಶರಿಗೆ,
ಒಂದೇ ಸಿಟಿಂಗ್ ನಲ್ಲಿ ಕೂತು ಕಥೆ ಬರೆಯಲಾಗುವುದಿಲ್ಲವೆಂದು ಕಥೆ ಬರೆಯುವುದನ್ನೇ ಬಿಟ್ಟು ಬಿಡೋಣವೆಂದು ಕೊಂಡಿದ್ದಾಗ
ಕಟ್ಟು ಕಥೆಯಂಥ ಹೊಸ ಪ್ರಕಾರದಿಂದ ಕಂತು ಕಂತಾಗಿಯೂ ಕಥೆ ಬರೆಯಬಹುದು ಅಂತ ಐಡಿಯಾ ಕೊಟ್ಟ ತ್ರಿವೇಣಿಯವರಿಗೆ,
ತಾನು ಕನ್ನಡ ಓದಲಾಗದಿದ್ದರೂ ಪ್ರತಿ ವಾರವೂ 'ಎಲ್ಲಿವರೆಗೆ ಬಂತು ನಿನ್ನ ಕಥೆ' ಅಂತ ವಿಚಾರಿಸುತ್ತಿದ್ದ, ಸಾಕೇ ಎಷ್ಟು ಎಳೀತೀಯೇ.. ಅಂತ ಕಿಚಾಯಿಸುತ್ತಿದ್ದ Greensburg ನಿಂದ Dodge city ವರೆಗಿನ ಪ್ರಯಾಣದ ಕಥೆಯನ್ನು ಬರೆಯಲು Google Maps ತೆರೆದು Directions ಹಾಕಿಕೊಟ್ಟ ಅರವಿಂದನಿಗೆ,
ಮತ್ತು
ನನ್ನ ಅಮ್ಮನಿಗೆ....