`ಸುಳ್ಳ'ನೊಬ್ಬನ ಕಣ್ಣ ಹನಿಗಳು...
ಅವನು ಚಿಕ್ಕವನಿದ್ದಾಗ ಊಟಮಾಡಲು,ನಿದ್ದೆ ಮಾಡಲು,ಸ್ನಾನ ಮಾಡಲು,ಕೊನೆಗೆ ಎರಡು ಮಾಡಿದಾಗ ತೊಳೆಸಿಕೊಳ್ಳಲು ಹೀಗೆ ಎಲ್ಲದಕ್ಕೂ ಹಟ ಮಾಡುತ್ತಿದ್ದ.ಈ ಎಲ್ಲದಕ್ಕೂ ಅವನಮ್ಮನ ಬಳಿ ಒಂದು ಸಿದ್ದೌಷದವಿತ್ತು.ಅದು ದಂಡಂ ದಶಗುಣಂ ಅಲ್ಲ.ಕಥೆಗಳು!ಅವನಮ್ಮ ಕಥೆ ಹೇಳುತ್ತೀನಂದರೆ ಸಾಕು.ಪುಂಗಿಯ ನಾದಕ್ಕೆ ತಲೆದೂಗುವ ಹಾವಿನಂತೆ ತೆಪ್ಪಗೆ ಗಲೀಜು ತೊಳೆಸಿಕೊಂಡು , ಅಮ್ಮ ತಿನ್ನಿಸಿದ ಅಷ್ಟೂ "ಮಮ್ಮು"ತಿಂದು ಕಥೆ ಕೇಳುತ್ತಾ ನಿದ್ದೆಗೆ ಜಾರುತ್ತಿದ್ದ.ಆದರೆ ಪ್ರತಿಯೊಂದು ಕಾರ್ಯಕ್ಕೂ ಅವನಮ್ಮ ಅವನಿಗೆ ಒಂದೊಂದು ಕಥೆ ಹೇಳಬೇಕಾಗಿತ್ತು ಅಷ್ಟೇ.
ದಿನಕ್ಕೆ ಮೂರು ಸಾರಿ ಊಟಮಾಡಿಸಲು 3 ಕಥೆ,ಸರಾಸರಿ ಎರಡುಸಾರಿ ಗಲೀಜು ತೊಳೆಸಲು 2 ಕಥೆ, ಸ್ನಾನಕ್ಕೊಂದು,ಹಾಲುಕುಡಿಯಲು 2 (ಬೆಳಗ್ಗೆ ಮತ್ತು ಸಂಜೆ)ಅಂತೂ ದಿನಕ್ಕೆ ಎಂಟು ಕಥೆ ಅವನಮ್ಮ ಹೇಳಲೇ ಬೇಕಿತ್ತು.ಅಷ್ಟಲ್ಲದೇ ಅವನು ನಡೆಯುತ್ತಲೋ,ಓಡುತ್ತಲೋ ಬಿದ್ದು ಅಳುವಾಗ ಅಳು ನಿಲ್ಲಿಸಲೆಂದು ಒಂದು ಕಥೆ.ಯಾರಾದರೂ ಪರಿಚಿತರು ಅದರಲ್ಲೂ ಗಂಡಸರು,`ಏನೋ ಮರೀ...' ಅಂತಾನೋ `ಪುಟ್ಟಾ' ಅಂತಾನೋ ಅವನನ್ನು ಗಬಕ್ಕನೆ ಹಿಡಿದು ಅಪ್ಪಿಕೊಂಡು ಚೆಂಡಿನಂತೆ ಮೇಲಕ್ಕೆತ್ತಿ`ಕ್ಯಾಚ್' ಹಿಡಿಯುವ ಆಟವಾಡಿದಾಗ ಅವನಿಗೆ ವಿಪರೀತ ಹೆದರಿಕೆಯಾಗಿ ಅಳು ಬಂದು ಬಿಡುತ್ತಿತ್ತು.ಆಗೆಲ್ಲಾ`ಬ್ಯಾ...'ಅಂತ ದೊಡ್ಡದಾಗಿ ಬಾಯಿ ತೆರೆದು ಅರಚಿ ಕೊಳ್ಳುತ್ತಿದ್ದ.ಆಗ ಅವನ ಅಳು ನಿಲ್ಲಿಸಲು ಅಮ್ಮ ಅವನಿಗೆ ಒಂದು ಸ್ಪೆಶಲ್ ಕಥೆ ಹೇಳುತ್ತಿದ್ದಳು.ಹೆಂಗಸರು ಅವನ ದುಂಡಗಿನ ಬಿಳಿಕೆನ್ನೆಯನ್ನು ಹಿಂಡಿ ಎಂಜಲು ಹಾರಿಸುತ್ತಾ ಲೊಚಲೊಚನೆ ಮುತ್ತಿಟ್ಟಾಗಲೂ ಅವನಿಗೆ ವಿಪರೀತ ಹಿಂಸೆಯಾಗಿ ಅಳು ಮೋರೆ ಮಾಡುತ್ತಿದ್ದನಾದರೂ ಅವನಮ್ಮ ಆಗ ಕಥೆ ಹೇಳುತ್ತಿರಲಿಲ್ಲಾ. ಎಲ್ಲ ಹೆಂಗಸರೂ (ಅವಳ ರೀತಿ) ಮಕ್ಕಳನ್ನು ನೋವಾಗದ ಹಾಗೆ ಮೃದುವಾಗಿ ಹ್ಯಾಂಡಲ್ ಮಾಡುತ್ತಾರೆಂದು ಅವನಮ್ಮ ತಪ್ಪು ತಿಳುವಳಿಕೆ ಹೊಂದಿದ್ದೇ ಅದಕ್ಕೆ ಕಾರಣವಲ್ಲದೆ ಬೇರೇನೂ ಅಲ್ಲ.
ಅವನ ಅಮ್ಮ ಅವನಿಗೆ ಯಾವ ಕಥೆಯನ್ನೂ ಎರಡನೇ ಬಾರಿ ಹೇಳಿದ್ದೇ ಇಲ್ಲ.ಪ್ರತೀಸಾರಿಯೂ ಒಂದು ಹೊಸ ಕಥೆಯೇ ಹೇಳುತ್ತಿದ್ದಳು.ಚಂದ್ರ ನೀರಲ್ಲಿ ಬಿದ್ದ ಕಥೆ,ಕಿತ್ತೂರು ರಾಣಿಯ ಕಥೆ,ಗಣೇಶನ ಕಥೆ,ಕೃಷ್ಣ ಮಾಮಿಯ ಕಥೆ,ಶಿವಾಜಿಯ ಕಥೆ,ಆಮೆ-ಮೊಲದ ಕಥೆ,ಏಳುಸಮುದ್ರ ಕೀಳು ಸಮುದ್ರದಾಚೆ ರಾಜಕುಮಾರಿಯನ್ನು ಅಡಗಿಸಿಟ್ಟ ರಾಕ್ಷಸನಕಥೆ ,ಗಾಂಧೀಜಿಯ ಕಥೆ,ಇಂದ್ರನೀಲಮಣಿಯ ಕಥೆ... ಹೀಗೇ ನೂರಾರು ಕಥೆ ಹೇಳುತ್ತಿದ್ದಳು.ಕೆಲವು ಕಥೆಗಳು ದೂರದ ಯಾವುದೋ ಲೋಕದಲ್ಲಿ,ಯಾವುದೋ ಊರಿನಲ್ಲಿ ನಡೆದರೆ ಕೆಲವು ಕಥೆಗಳಂತೂ ಅವರ ಅಂಗಳದಲ್ಲೇ ನಡೆದವಾಗಿರುತ್ತಿದ್ದವು.
ಅಂಗಳದ ಸಂಪಿಗೆ ಮರವೂ ಮಾವಿನಮರವೂ ಒಂದರೊಟ್ಟಿಗೊಂದು ಏನು ಮಾತಾಡುತ್ತಿದ್ದವು ಎಂಬುದೇ ಒಂದು ಕಥೆ.ಒಮ್ಮೆಯಂತೂ ಅವಳು ನೀರು ತರಲು ಕೆರೆಗೆ ಹೋದಾಗ ಬಿಂದಿಗೆ ನೀರಿಗೆ ಹೇಗೆ ತಮಾಶೆ ಮಾಡಿತು ಎಂಬುದೇ ಒಂದು ಕಥೆಯಾಗಿ ಹೇಳಿದ್ದಳು ಅಮ್ಮ.
ಒಂದು ಬೆಳಗ್ಗೆ ತಿಂಡಿ ತಿನ್ನುವಾಗ ಉಪ್ಪಿಟ್ಟಿನಲ್ಲಿ ಅಚಾನಕ್ಕಾಗಿ ಅವನಿಗೆ ಒಂದು ಮೆಣಸಿನ ಕಾಯಿ ತುಂಡು ಸಿಕ್ಕಿ ಅವನ ಬಾಯಿ ಕಾರವಾಗಿ ಅಳಲಾರಂಭಿಸಿದ (ಅವನಮ್ಮ ಅವನಿಗೆ ಉಪ್ಪಿಟ್ಟು ಕೊಡುವ ಮುಂಚೆ ಎಲ್ಲಾ ಮೆಣಸಿನ ಕಾಯಿ ತುಂಡುಗಳನ್ನೂ ಆರಿಸಿ ಬಿಸಾಕಿದ್ದರೂ ಅದು ಹೇಗೋ ಒಂದು ತುಂಡು ಉಳಿದುಕೊಂಡು ಬಿಟ್ಟಿತ್ತು)ಅವನ ಅಳು ನಿಲ್ಲಿಸಲು ಅವನಿಗೆ ಕಲ್ಲು ಸಕ್ಕರೆ ಚೂರು ಕೊಟ್ಟು ಅಮ್ಮ ಅಡುಗೆ ಮನೆಯಲ್ಲಿನ ಕಪ್ಪು ಇರುವೆ ಮತ್ತು ಬೇಳೆ ಡಬ್ಬದ ಕಥೆ ಹೇಳಿದಳು.ತುಂಬಾ ತಮಾಶೆಯಾಗಿ ಮಜವಾಗಿತ್ತು ಕಥೆ. ಚುರುಕಾಗಿ ಸರಸರ ಎಲ್ಲಾ ಕಡೆ ಓಡಾಡುತ್ತಾ ಕಾಳು ಒಟ್ಟು ಮಾಡುವ ಕಪ್ಪಿರುವೆ ಸದಾ ಒಂದು ಕಡೆಯೇ ಕೂತ ಬೇಳೆ ಡಬ್ಬಕ್ಕೆ ಹೇಳಿದ ಕಥೆ ಅದು.ಅಮ್ಮ ಆ ಕಥೆ ಕೇಳಿಸಿಕೊಂಡು ಅವನಿಗೆ ಹೇಳಿದ್ದು. ಅವನು ಕಥೆ ಕೇಳಿ ಬಾಯಿನ ಕಾರ ಮರೆತು ಜೋರಾಗಿ `ಹ್ಹಿ...ಹ್ಹಿ..ಹ್ಹಿ...' ಅಂತ ನಕ್ಕಿದ್ದ
ಆ ಸಂಜೆ ಅಮ್ಮ ಕೆರೆಯಿಂದ ನೀರು ತಂದು ದೇವರಿಗೆ ದೀಪ ಹಚ್ಚಿದ ಮೇಲೆ ಎಂದಿನಂತೆ ಅವನ ಅಂದಿನ ಪಾಠ ಓದಿಸಿದಳು.ಆಮೇಲೆ ಅವನಿಗೆ ಒಂದು ಕಥೆ ಹೇಳಿದಳು ಅದರಲ್ಲಿಆಕಾಶದ ಕರ್ರನೆ ಮೋಡ ಮತ್ತು ಕೆರೆ ಬದಿಯ ಅರಳಿಮರದ ಮಾತುಕಥೆಯ ವಿವರಗಳಿದ್ದವು. ಕರ್ರನೆ ಮೋಡಾನೂ ಅರಳೀಮರನೂ ಸ್ನೇಹಿತರೆಂದೂ ಪ್ರತಿವರ್ಷ ಮಳೆಸುರಿಸಲು ಬಂದಾಗಕರ್ರನೆ ಮೋಡ ಅರಳೀಮರದ ಜೊತೆ ದಿನಗಟ್ಟಲೇ ಮಾತಾಡುವುದನ್ನು ತಾನು ಕೇಳಿಸಿಕೊಡಿರುವುದಾಗಿಯೂ ಅಮ್ಮ ಹೇಳಿದಳು.ಅವು ಏನು ಮಾತಾಡುತ್ತವೆ? ಅಂತ ಅವನು ಕುತೂಹಲದಿಂದ ಕೇಳಿದಾಗ `ಕರೀ ಮೋಡಾ ಅಂದ್ರೆ ಏನೆಂದು ಕೊಂಡಿದ್ದೀಯೋ...ಪರಶುರಾಮ ಕಣೋ...ಅದು ಪರಶುರಾಮ ಪ್ರಪಂಚವೆಲ್ಲಾ ಸುತ್ತಿ ಬರುತ್ತೆ ಹಾಗೆ ಯಾವ್ಯಾವ ಊರು ನೋಡಿತ್ತೋ...ಅಲ್ಲಿನ ಸಮಾಚಾರವೆಲ್ಲ ಹೇಳುತ್ತೆ ಅಷ್ಟಕ್ಕೂ ನಾನೇನು ಅರಳೀಕಟ್ಟೆ ಮೇಲೆ ಕೂತು ದಿನಪೂರ್ತಿ ಅದರ ಮಾತು ಕೇಳಿದೀನಾ? ನಾನು ಹಾಗೆ ಕೂತರೆ ಆಯ್ತು ನೋಡು ನಿನಗೂ ನಿಮ್ಮಪ್ಪನಿಗೂ ಊಟಾ ತಿಂಡಿ ಯಾರಪ್ಪಾ ಮಾಡಿಕೊಡೋರು? ಏನೋ ನಾನು ಕೆರೆಗೆ ಹೋಗಿ ಬರೋ ಹೊತ್ತಲ್ಲಿ ಏನು ಮಾತಾಡುತ್ತಿದ್ವೋ ಅಷ್ಟೇ ನಂಗೆ ಗೊತ್ತಿರೋದು"ಅಂತ ಅಂದು ಬಿಟ್ಟಳು ಆದರೆ ಕೆರೆ ಬದಿಯ ಒಂದೊಂದು ಮರಕ್ಕೂ ಒಂದೊಂದು ಮೋಡದ ಗೆಳೆಕಾರ ಇದ್ದಾನೆಂದು ಗುಟ್ಟು ಹೇಳುವವಳಂತೆ ಹೇಳಿದಳು.
ಅವನಿಗೆ ಏನೋ ಒಂದು ರೀತಿ ಅಯೋಮಯವಾಗಿ (ಈ ತನಕ ಅವನು ಕೇಳಿದ ಕಥೆಗಳಿಂದ ಪ್ರಾಪ್ತವಾದ ಜ್ಞಾನದ ಪ್ರಭಾವವಿರಬೇಕು) ಶಾಪ ಬಂದ ಗಂಧರ್ವ ಯಾರು ಹಾಗಾದರೇ? ಮರಾನೋ? ಮೋಡಾನೋ? ಅದ್ಯಾಕೆ ಮೋಡಗಳು ಮರಗಳನ್ನ ಮಾತಾಡಿಸೋಕೆ ಓಡೋಡಿ ಬರೋದು? "ನಿನ್ನ ತಪ್ಪಿಗೆ ನೀನು ಮುಂದಲ ಜನ್ಮದಲ್ಲಿ ಮರವಾಗಿ ಹುಟ್ಟು,ನೀನು ಮೋಡವಾಗಿ ಹುಟ್ಟು ಅಂತ ಗಂಧರ್ವನಿಗೂ,ಗಂಧರ್ವ ಕನ್ಯೆಗೂ ಶಾಪ ಕೊಟ್ಟವರು ಯಾರು? ಎಂದೆಲ್ಲಾ ಅವನಿಗೆ ಯೋಚನೆಯಾಗಿ ಹೋಯಿತು ಹಾಗೇ ಯೋಚನೆ ಮಾಡ್ತಾ ಮಾಡ್ತಾ ನಿದ್ದೆ ಬಂದು ಬಿಡ್ತು.
ಮಾರನೇದಿನ ಅಮ್ಮ ನೀರು ತರಲು ಹೊರಟಾಗ ಅಮ್ಮನ ಜೊತೆ ಕೆರೆಗೆ ಹೋಗಿ ಕರ್ರನೆ ಮೋಡ ಅರಳಿಮರದ ಜೊತೆ ಮಾತಾಡುವುದನ್ನು ಖುದ್ದಾಗಿ ನೋಡಿ,ಕೇಳಿ ಬಂದ.ಅವುಗಳ ಬಹಳಷ್ಟು ಮಾತುಗಳು ಅವನಿಗೆ ಅರ್ಥ ಆಗದಿದ್ದರೂ ಏನೋ ಒಂಥರಾ ಮಜಾ ಬಂತು.
ಮನೆಯ ಹಿಂದಿನ ಗುಡ್ಡದಲ್ಲಿ ನವಿಲು ಕುಣಿಯುತ್ತೆ ಅಂತ ಅಮ್ಮ ಒಮ್ಮೆ ಕಥೆ ಹೇಳಿದ್ದಳು.ಅವನು ಅಪ್ಪನ ಜೊತೆ ಗುಡ್ಡಕ್ಕೆ ಹೋಗಿ ಕುಣಿವ ನವಿಲುಗಳನ್ನು ನೋಡಿ ನೆಲದಲ್ಲಿ ಬಿದ್ದಿದ್ದ ಅದರ ಗರಿ ಎತ್ತಿಕೊಂಡು ಮನೆಗೆ ತಂದ.ಗರಿಯನ್ನು ಅವನ ಶಾಲೆಯ ಪುಸ್ತಕದಲ್ಲಿಟ್ಟು ಪುಡಿಕಾಗದಗಳ ಊಟ ಹಾಕಿ ಅದು ಮರಿ ಹಾಕುತ್ತಾ ಅಂತ ದಿನವೂ ನೋಡುತ್ತಿದ್ದ. ತುಂಬಾ ದಿನಗಳಾದರೂ ಗರಿ ಮರಿ ಹಾಕಲೇ ಇಲ್ಲ. ಕೊನೆಗೆ ಅವನಿಗೆ ಕಾದೂ ಕಾದೂ ಸಾಕಾಗಿ `ನವಿಲು ಗರಿ ಮರಿ ಹಾಕಲು ಎಷ್ಟು ದಿನ ಬೇಕೂ ಅಂತ ಅಮ್ಮನನ್ನೇ ಕೇಳಿದ್ದಕ್ಕೆ ಅವಳು `ಹುಚ್ಚಪ್ಪಾ... ಗರಿ ಎಲ್ಲಾದರೂ ಮರಿ ಹಾಕುತ್ತೇನೋ...' ಅಂತ ನಕ್ಕುಬಿಟ್ಟಳು. `ನಿನಗೆ ಇನ್ನಷ್ಟು ಗರಿ ಬೇಕಾದ್ರೆ ಗುಡ್ಡಕ್ಕೆ ಹೋಗಿ ಆರಿಸಿಕೊಂಡು ಬರೋಣ ಅಂದಳು.ಅವನು `ನವಿಲು ಮರಿ ಹಾಕುತ್ತಾ?' ಅಂತ ಕೇಳಿದ್ದಕ್ಕೆ `ನವಿಲು ಸೈತ ಮರಿ ಹಾಕಲ್ಲ ಮೊಟ್ಟೆ ಇಡುತ್ತೆ,ಮೊಟ್ಟೆ ಒಡೆದು ಮರಿ ಬರುತ್ತೆ ತಿಳಕೋ' ಎಂದು ಅವನಿಗೆ ಮಗುಟ ಉಡಿಸಿ ಅವನ ಅದೇ ಗರಿ ತಲೆಯಲ್ಲಿ ಸಿಕ್ಕಿಸಿ ಕೃಷ್ಣನ ಅಲಂಕಾರ ಮಾಡಿದಳು.ಸಂಜೆ ಅಪ್ಪ ಬಂದ ಮೇಲೆ ಅವನು,ಅಪ್ಪ ,ಅಮ್ಮ 8 ಮೈಲಿ ದೂರದ `ಮೂರ್ತಿ ಸ್ಟೂಡಿಯೋ'ಗೆ ವೆಂಕಟೇಶ ಬಸ್ಸಿನಲ್ಲಿ ಹೋಗಿ ಫೋಟೋ ತೆಗೆಸಿಕೊಂಡು ಬಂದರು
ಹೀಗೆ ಅವನು ತನ್ನ ಶಾಲೆಗೂ ತೋಟಕ್ಕೂ ಓಡಾಡುತ್ತಾ, ಶಾಲೆಯ ಪಾಠ,ಅಮ್ಮನ ಕಥೆ ಕೇಳುತ್ತಾ ಉದ್ದುದ್ದ ಬೆಳೀತಿದ್ದ.ಅವನಿಗೆ ಅಮ್ಮ ಶಿವ-ಪಾರ್ವತಿ ಕಥೆ,ಅಂಗಳದ ನಿತ್ಯಮಲ್ಲಿಗೆ ಬಳ್ಳಿ ಮತ್ತು ಮುತ್ತುಗದ ಮರದ ಕಥೆ,ಏಕಲವ್ಯನ ಕಥೆ,ಹಿತ್ತಲಿನ ಕಪ್ಪೆ ಮತ್ತು ಹೆರಳೇಗಿಡದ ಕಥೆ,ಕೆರೆಯಲ್ಲಿನ ಕಮಲದ ಹೂ ಮತ್ತು ಮುತ್ತಿನ ಮಣಿಯಂಥಾ ನೀರಿನ ಕಥೆ, ಸುಭಾಸ್ ಚಂದ್ರ ಬೋಸರ ಕಥೆ,ಅಪ್ಪನ ಕಬ್ಬಿಣದ ಟ್ರಂಕಿನ ಕಥೆ,ಅವಳ ಹಂಸದ ಚಿತ್ರದ ಜಡೆಬಿಳ್ಳೆ ಹೇಳಿದ ಕಥೆ,ರಾಜಾವಿಕ್ರಮಾದಿತ್ಯನ ಕಥೆ,ಹರಿಶ್ಚಂದ್ರನ ಕಥೆ,ಸಂಗೊಳ್ಳಿ ರಾಯಣ್ಣನ ಕಥೆ ,ಆಕಾಶದಲ್ಲಿ ತುಂಬಾ ಅಪರೂಪಕ್ಕೆ ಕಾಣುವ ವಿಮಾನದ ಕಥೆ..... ಹೀಗೇ ತರಾವರಿ ಕಥೆ ಹೇಳುತ್ತಿದ್ದಳು
ಕಥೆ ಕೇಳುತ್ತಾ ಅವನು ದೊಡ್ಡವನಾದ.ದೊಡ್ಡ ದೊಡ್ಡ ಓದು ಓದಿದ.ದೊಡ್ಡ ಆಫೀಸೊಂದರಲ್ಲಿ ದೊಡ್ಡಸಂಬಳದ ದೊಡ್ಡ ಕೆಲಸವಾಯಿತು ಅವನ ಊರೂ ಅಷ್ಟೊತ್ತಿಗೆ ಸಾಕಷ್ಟು ದೊಡ್ಡದಾಗಿ ಬೆಳೆದಿತ್ತುಅದನ್ನೆಲ್ಲ ನೋದಲು ಅಮ್ಮ ಮಾತ್ರ ಇರಲಿಲ್ಲಾ...
********************************************************************
ಅದೆಲ್ಲಾ ಹಳೇ ಕಥೆ.ಈಗ ಅವನಿಗೆ ಮದುವೆಯಾಗಿದೆ.ಮಕ್ಕಳೂ ಇದ್ದಾರೆ.ಹೆಂಡತಿ ತುಂಬಾ ಬುದ್ದಿವಂತೆ. ಸುಮ್ಮನೆ ಹಾಳು-ಮೂಳು ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡುವುದಿಲ್ಲಅವಳೂ ದೊಡ್ಡ ಓದು ಓದಿದ್ದಾಳೆ.ಒಂದು ದೊಡ್ಡ ಆಫೀಸಿನಲ್ಲಿ ಕೆಲಸ ಮಾಡುತ್ತಾಳೆ.ಮಕ್ಕಳೂ ಮುದ್ದು ಮುದ್ದಾಗಿವೆ. ಅವನು ಒಮ್ಮೊಮ್ಮೆ ಅವನಮ್ಮ ಅವನಿಗೆ ಹೇಳುತ್ತಿದ್ದ ಕಥೆಗಳನ್ನು ಮಕ್ಕಳಿಗೆ ಹೇಳುತ್ತಾನೆ ಅದಕ್ಕೆ ಅವನ ಹೆಂಡತಿ "ಇದೇನು ಔಟ್ ಡೇಟೆಡ್ ವಿಷಯಗಳ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತೀರಿ...ಹಾಗೆಲ್ಲಾ ಹೇಳಬೇಡಿ...ಮಕ್ಕಳಿಗೆ ಬ್ಲೈಂಡ್ ಬಿಲೀಫ್ ಬಂದುಬಿಡತ್ತೆ.ಸೂಪರ್ ಸ್ಟೀಶಿಯಸ್ ಆಗೋಗ್ತಾರಷ್ಟೇ ಮಕ್ಕಳು' ಅಂತಾ ಎಚ್ಚರಿಸುತ್ತಾಳೆಅವನ ಹೆಂಡತಿ ಅವನಮ್ಮನ ಹಾಗೆ ಮಕ್ಕಳಿಗೆ ಕಥೆ ಹೇಳುವುದಿಲ್ಲ. ಹಾಗೆಲ್ಲಾ ಕಥೆ-ಪಥೆ ಹೇಳಿ ವ್ಯರ್ಥ ಮಾಡಲು ಅವಳಿಗೆ ಸಮಯವೂ ಇಲ್ಲ.ಟಿ.ವಿ ಯಲ್ಲಿ ಮಕ್ಕಳ ಫ್ಯೂಚರ್ ಗೆ ಉಪಯೋಗವಾಗುವ ಎಜ್ಯೂಕೇಟಿವ್ ಡಿ.ವಿ.ಡಿ ಹಾಕಿ ತೋರಿಸುತ್ತಾಳೆ.ಮಕ್ಕಳು ಕಾಲಕ್ಕೆ ತಕ್ಕಂತೆ ಅಪ್-ಡೇಟ್ ಆಗಿರಬೇಕು ಅನ್ನುತ್ತಾಳೆ.
ಮಕ್ಕಳನ್ನು ಬೆನ್ನ ಮೇಲೆ ಭುಜದ ಮೇಲೆ ಕೂರಿಸಿಕೊಂಡು ಅವನು ಆಟವಾಡಿಸಿದರೆ ಮಕ್ಕಳಿಗೆ ಅವನು ಸರಿಯಾಗಿ ಡಿಸಿಪ್ಲಿನ್ ಕಲಿಸುವುದಿಲ್ಲವೆಂದು ಅವಳಿಗೆ ಬೇಸರವಾಗುತ್ತದೆ.ನಾನು ಕಷ್ಟ ಪಟ್ಟು ಕಲಿಸಿದ ಶಿಸ್ತೆಲ್ಲಾ ನೀವು ಹಾಳು ಮಾಡುತ್ತೀರಿ ಅಂತ ಕೂಗಾಡುತ್ತಾಳೆ
ಹೀಗಿರುವಾಗ ಒಂದು ರಾತ್ರಿ ಅವನ ಹೆಂಡತಿ ಅವಳ ಆಫೀಸಿನಲ್ಲಿ ತುರ್ತು ಮೀಟಿಂಗ್ ಬಂದಿದ್ದರಿಂದ ತಾನು ಮನೆಗೆ ಬರುವಷ್ಟರಲ್ಲಿ ಬಹಳಾ ತಡವಾಗಬಹುದೆಂದೂ ಬಹುಶಃ ಅರ್ಧ ರಾತ್ರಿಯೇ ಆಗಬಹುದೆಂದೂ ಮಕ್ಕಳಿಗೆ ಊಟ ಮಾಡಿಸಿ ಮಲಗಿಸಬೇಕೆಂದು ಹೇಳಿದಳು.ಅವನು ಮಕ್ಕಳಿಗೆ ಊಟ ಮಾಡಿಸಿ ಮಲಗಿಸುವಾಗ ಅಮ್ಮನನ್ನು ಮಿಸ್ ಮಾಡುತ್ತಿದ್ದ ಮಕ್ಕಳನ್ನು ಖುಶಿ ಪಡಿಸಲು ಕೆರೆಯಲ್ಲಿನ ಕಮಲದ ಹೂವಿನ ಕಥೆ,ಕರ್ರನೆ ಮೋಡ ಮತ್ತು ಅರಳೀಮರದ ಕಥೆ ಹೇಳಿದ.ಕೆರೆ ಅಂದರೆ ಸ್ವಿಮ್ಮಿಂಗ್ ಪೂಲ್ ತರ ಇರುತ್ತಾ ಅಂತ ಮಗಳು ಕೇಳಿದಳು.ಕರ್ರನೆ ಮೋಡ ಮತ್ತು ಅರಳೀಮರದ ಕಥೆ ಎಲ್ಲಾ ಬಂಡಲ್ ಅಂದುಬಿಟ್ಟ ಮಗ.
ಅವನು ಹಸಿರು ಕಾಲುದಾರಿ ಅಂಕುಡೊಕಾಗಿ ಸುತ್ತಿ ನವಿಲು ಗುಡ್ಡದ ಕಡೆ ಮಾಯವಾಗುತ್ತಿತ್ತು ಎಂದು ಹೇಳಿದಾಗ ಮಕ್ಕಳು ಅವರ ಫ್ಲ್ಯಾಟ್ ನ ಕಿಟಕಿಯಿಂದ ಬಗ್ಗಿ ಕೆಳಗಿನ ರಸ್ತೆ ನೋಡಿದರುಆದರೆ ಅವರಿಗೆ ಬರೀ ಕ್ಯಾಮ್ರಿ,ಸುಮೋ ಮತ್ತು ಸ್ಯಾಂತ್ರೋಗಳೇ ಕಾಣಿಸಿದವು
ಅವನು ತನ್ನ ಅಜ್ಜಿ ಮನೆ ಎಷ್ಟು ದೊಡ್ಡದಾಗಿತ್ತು.ಮನೆಯ ಕಂಭಗಳ ಚಿತ್ತಾರ ಎಂಥದಿತ್ತು,ಒಂದೇ ಮನೆಯಲ್ಲಿ ಎಷ್ಟೊಂದು ಜನ ಇರುತ್ತಿದ್ದರು 'ಎಂದೆಲ್ಲಾ ಕಥೆಯಾಗಿ ಹೇಳಿದಾಗ ಮಕ್ಕಳು ಅಪನಂಬಿಕೆಯಿಂದ ಅವನನ್ನೇ ದಿಟ್ಟಿಸಿ ನೋಡುತ್ತಿದ್ದರು.
ರಾತ್ರಿ ಬಹಳ ಹೊತ್ತಾಯಿತೆಂದು ಇಬ್ಬರನ್ನೂ ಮಲಗಿಸಿ ಬೆಡ್ ಲ್ಯಾಂಪ್ ಹಾಕಿ ಹೊದಿಕೆ ಹೊದಿಸಿ ಮುತ್ತಿಟ್ಟು ಹೊರಡುವಾಗ ಮಗಳು ಅವನ ಕೈ ಹಿಡಿದು ಜಗ್ಗಿದಳು. `ಏನಮ್ಮಾ...' ಎಂದು ಅವನು ಬಾಗಿ ಅವಳ ಮುಖ ನೋಡಿದ.ಬೆಡ್ ಲ್ಯಾಂಪಿನ ಮಂದ ಬೆಳಕಲ್ಲಿ,ಮಗಳ ಮುಖದಲ್ಲಿ ಅವನ ಅಮ್ಮನ ಹೋಲಿಕೆಯೇ ಕಂಡು ಬಂದು ಒಂದು ಕ್ಷ್ಣಣ ಖುಶಿಯಾಯಿತು ಅವನಿಗೆ."ಪಪ್ಪ ,ನೀನೊಬ್ಬ ದೊಡ್ಡ ಲಯರ್.. ಬರೀ ಸುಳ್ಳು ಸುಳ್ಳೇ ಹೇಳುತ್ತೀ...ಕೇರ್ ಫುಲ್...ನಿನ್ನ ಮೂಗು ಉದ್ದ ಆಗಿ ಬಿಡುತ್ತೆ ಅಷ್ಟೇ..." ಅಂದಳು ಮಗಳು. ಅವನಿಗೆ ಗಂಟಲು ಕಟ್ಟಿದಂತಾಗಿ ಮಾತೇ ಹೊರಡಲಿಲ್ಲ. ಸುಮ್ಮನೆ ಮಗಳ ಹಣೆ ನೇವರಿಸಿ ರೂಮಿನಿಂದ ಹೊರಬಂದ.ಕಣ್ಣಿನಿಂದೊಂದು ದೊಡ್ಡ ಹನಿ ಜಾರಿ ಅವನ ಕೆನ್ನೆ ತೋಯಿಸಿತು. ಅದು ಮಗಳು ಅವನನ್ನು "ಸುಳ್ಳ" ಅಂದಿದ್ದಕ್ಕೋ ಅಥವಾ ಇನ್ಯಾವ ಕಾರಣಕ್ಕೋ ಅವನಿಗೆ ಸ್ಪಷ್ಟವಾಗಲಿಲ್ಲ
---------------------------------------
Subscribe to:
Post Comments (Atom)
1 comment:
ಬೊಂಬಾಟ್ ಆಗಿದೆ....
ಅಂದ ಹಾಗೆ, ಇಲ್ಲಿಗೆ ಬಂದು ಇಂಥ ಕಥೆ ಓದಿ, ಇಲ್ಲಿ ನಾಲ್ಕಕ್ಷರ ಗೀಚಿ ಹೋಗುವವರೂ ಸುಳ್ಳರಾ? ಅವರ ಮೂಗೂ ಉದ್ದ ಆಗತ್ತಾ? ಆ ಪುಟ್ಟ ಬುದ್ಧಿವಂತ ಮಗಳನ್ನ ಕೇಳಿ ಉತ್ರ ಹೇಳೀ.
Post a Comment