Tuesday, January 27, 2009

ಹತ್ತರ ಸೊಗಸು

ಕೆನ್ನೆಗಿತ್ತಾಗ

ಗಲ್ಲದಲ್ಲಿ ಗುಳಿ

ತುಟಿಗಳಿಗೂ ಸಹ

ತಹತಹ

ಅಂಗಾಲಿಗಿಟ್ಟರೆ

ತಪ್ಪೇನು


ಒಪ್ಪಿ ನಡೆದ ಹೆಜ್ಜೆ

ಗುರುತಿಗೆ ವರುಷ ಹತ್ತು

ಒತ್ತೊತ್ತಾದ ಕೂದಲೀಗ

ಸ್ವಲ್ಪ ವಿರಳ

ಹಾಗೆಂದು

ಮಲ್ಲಿಗೆ

ಮುಡಿಯ ಬಾರದೇನು?


ಕಳಿತದ್ದು ಮಾವು,

ಜೊತೆಗೆ ಬೇವೂ

ಬಣ್ಣದ ಸೌತೆಗೆ ಕೆನ್ನೆಯಲಿ ಸುಕ್ಕು

ನಾಳೆ ಅದ ಬಳಸಿಬಿಡಬೇಕು

ಬೋಗುಣಿಯಲಿ ಹೊಂಬಣ್ಣದ ಅಚ್ಚು

ಹಳೆಅಕ್ಕಿ ಒದಗುವುದು ಹೆಚ್ಚು



ರಸ್ತೆ ತಿರುವಲ್ಲಿ ಬೆಣ್ಣೆಪಾದ,ಶ್ರೀಪಾದ

ಮನದಲ್ಲಿ ಹತ್ತರ ಸೊಗಸು

ಇಪ್ಪತ್ತು ಬೆರಳುಗಳಿಗೇಕೋ

ಈಗೀಗ ಸ್ವಲ್ಪ ಮುನಿಸು

ನಾಲ್ಕು ಕಣ್ಣಲ್ಲಿ

ನೂರು ವರುಷದ ಕನಸು