Tuesday, December 18, 2007

ಮಧ್ಯದವಳು

`ನೀನು ಅವಳಿಗಿನ್ನ ದೊಡ್ಡವಳು ಸ್ವಲ್ಪ ದೊಡ್ಡತನ ತೋರಿಸು...'ಈ ಮಾತು ಕಿವಿಯಲ್ಲಿ ರಿಂಗಣಿಸುತ್ತಿರಲು ಬೆಪ್ಪಾಗಿ ಕೂತಿದ್ದಳು ಸುಮಿತ್ರಾ... ವರುಷಗಳ ಹಿಂದೆ ತಮ್ಮ ಹುಟ್ಟಿದಾಗ ಅಪ್ಪ ಕೂಡಾ ಹೀಗೇ ಹೇಳಿದ್ದರಲ್ಲವಾ...ನೆನಪಿಸಿ ಕೊಂಡಳು ಅಕ್ಕ ತನ್ನನ್ನು ದಬಾಯಿಸುತ್ತಾಳೆಂದು ಚೆಂಡಾಟದಲ್ಲಿ, ಮುತ್ತು ಕವಡೆ ಆಟದಲ್ಲಿ ಕೊನೆಗೆ ಉಯ್ಯಾಲೆ ತೂಗಿಕೊಳ್ಳುವಾಗಲೂ ಗೋಳು ಹೊಯ್ದು ಕೊಳ್ಳುತ್ತಾಳೆಂದು ಅಪ್ಪನಿಗೆ ಹೇಳಿದಾಗಲೆಲ್ಲಾ `ನೀನು ಚಿಕ್ಕವಳು...ಸ್ವಲ್ಪ ಅನುಸರಿಸಿಕೊಂಡು ಹೋಗುವುದು ಕಲಿ....'ಎಂಬ ಅಪ್ಪನ ಮಾತು...
ಅದ ಕೇಳಿ ಕೇಳೀ ಸಾಕಾಗಿದ್ದವಳಿಗೆ ತಮ್ಮ ಹುಟ್ಟಿದಾಗ ತುಸು ಖುಷಿಯಾಗಿದ್ದು ಆದರೆ ತಮ್ಮನ ತಂಟೆ ತಡೆಯಲಾರದೇ ಅವನನ್ನ ಗದರಿಕೊಂಡಾಗ ಅದೇ ಅಪ್ಪ `ನೀನು ದೊಡ್ಡವಳು ಸ್ವಲ್ಪ ದೊಡ್ಡತನ ತೋರಿಸು...' ಅಂದು ಬಿಟ್ಟಿದ್ದರು! ನಾಲ್ಕರ ಬಾಲೆಗೆ ನಾನು ದೊಡ್ಡವಳೋ ಚಿಕ್ಕವಳೋ ಎಂಬ ಗೊಂದಲ... ಅಂದಿನಿಂದಾ ಅದು ತನಗೆ ಜನ್ಮಕ್ಕಂಟಿ ಬಂದಿದ್ದೋ ಎಂಬಂತೆ ಉಳಿದು ಹೋಗಿತ್ತು
ಮದುವೆಯಾಗಿ ಬಂದಾಗ ಗಂಡ`ನೀನು ಚಿಕ್ಕವಳು...ಸ್ವಲ್ಪ ಅನುಸರಿಸಿಕೊಂಡು ಹೋಗುವುದು ಕಲಿ....' ಎಂಬ ಮಾತು ಹೇಳಿದ್ದವನು ಈಗ ಹೊಸಬಳು ಬಂದಾಕ್ಷಣ ಅವಳನ್ನು ದೊಡ್ಡವಳ ಪಟ್ಟಕ್ಕೆ ಏರಿಸಿಬಿಟ್ಟಿದ್ದ...

ದಶರಥ ಪಕ್ಕದಿಂದ ಎದ್ದು ಹೋಗಿ ಬಹಳ ಹೊತ್ತಾಗಿದ್ದರೂ ಬೊಗಸೆಯಲ್ಲಿ ಮುಖ ಹಿಡಿದ ಸುಮಿತ್ರಾ ಪ್ರತಿಮೆಯಾಗಿ ಕೂತೇ ಇದ್ದಳು... ಕೆನ್ನ ಮೇಲೆ ಕಣ್ಣೀರು ಕರೆಗಟ್ಟುತ್ತಿತ್ತು...

3 comments:

ಸುಪ್ತದೀಪ್ತಿ suptadeepti said...

"ಹಿರಿಯ ಮಗು ಅಪ್ಪನ ಮುದ್ದು, ಕಿರಿಯ ಮಗು ಅಮ್ಮನ ಮುದ್ದು, ಮಧ್ಯದ ಮಗುವನ್ನು ಕೇಳೋರೇ ಇಲ್ಲ" ಇದು ನಾನು ಚಿಕ್ಕವಳಿದ್ದಾಗ ಕೇಳಿದ್ದ ಮಾತು.... ಈ ಕಥೆ ಓದಿದಾಗ ಮತ್ತೆ ನೆನಪಾಯಿತು.

sritri said...

ಹೌದಲ್ಲಾ! ಹಿರಿತನದ ಕೌಸಲ್ಯೆ, ಕಿರಿಯಳಾದ ಕೈಕೇಯಿಯರ ನಡುವಿನ ಸುಮಿತ್ರೆಯ ಕಣ್ಣೀರು ಎಲ್ಲೂ ಕಥೆಯಾದಂತಿಲ್ಲ!

ಸಿಂಧು sindhu said...

ಚೆನಾಗಿದೆ. "ಮಧ್ಯದವಳು ಸುಮಿತ್ರೆ" ಎಂಬ ಮಾತೇ ಇದೆಯಲ್ಲ. ಬದುಕಿನ ಚಿತ್ರವನ್ನ ಕಾವ್ಯನಾಯಕಿಗೆ ಅನ್ವಯಿಸಿ ಚಿತ್ರಿಸಿದ್ದು ಇಷ್ಟವಾಯಿತು.

ಹೆಚ್.ವಿ.ಸಾವಿತ್ರಮ್ಮನವರ ವಿಮುಕ್ತೆ ಮತ್ತು ರಾಮ-ಸೀತೆ-ರಾವಣ ಎನ್ನುವ ಪುಸ್ತಕಗಳಲ್ಲಿ ಸುಮಿತ್ರೆಯ ಪಾತ್ರಪೋಷಣೆ ಸಹಜ ಬೆಳಕಿನಲ್ಲಿ ಆಗಿದೆ ಅಂತ ನನಗನ್ನಿಸುತ್ತೆ.

ಪ್ರೀತಿಯಿಂದ
ಸಿಂಧು