Tuesday, March 17, 2009

ಹೊಳೆಯಾಗಿ ಹರಿದ ಬಂಗಾರದ ನೆನಪು...

ಕಾರ್ಮೋಡದಂಚಿನ ಗೆರೆ (ಭಾಗ ಎರಡು)

ಭಾನುವಾರ ಎಂದಿನಂತೆ ಮನೆಗೆ ಕಾಲ್ ಮಾಡಿದಳು ನಿಶಿ
ಫೋನ್ ಎತ್ತಿದ್ದು ಅಮ್ಮ.ಅಜ್ಜಿಗೆ ಹುಷಾರಿಲ್ಲ ಮಿಕ್ಕವರು ಪರವಾಗಿಲ್ಲ ಅಂದರು
ಹಾಗಂದ್ರೇನಮ್ಮಾ ಅಂತ ನಿಶಿ ಕೇಳಿದ್ದಕ್ಕೆ ಉದ್ದಕ್ಕೆ ಉಸಿರು ಬಿಟ್ಟರು ಅಮ್ಮ
ಅಪ್ಪನಿಗೆ ಶುಗರ್ ಇಳಿಯುತ್ತೆ ಹತ್ತತ್ತೆ ಕಣೆ ಅಂದರು
ನಿಶಿಗೆ ಚೆಂತೆಯಾಯಿತು ಹೌದಾ ಅಂದಳಷ್ಟೇ... ಅಪ್ಪನ ಬಾಯಿಚಪಲದ ಬುದ್ದಿ ಅವಳಿಗೆ ಗೊತ್ತು!
ಹೆಚ್ಚೇನೂ ಹೇಳಲಾರಳು ಅಮ್ಮ ಅಂತಾನೂ ಗೊತ್ತು!


ಮತ್ತೆ ಅಜ್ಜಿಗೆ ವಯಸ್ಸಾಗಿದೆ ಅಮ್ಮನಿಗೆ ಇತ್ತೀಚೆಗೆ ವೀಜಿಂಗ್ ,ಸೊಂಟ ನೋವೂ ಜಾಸ್ತಿಯಾಗಿದೆ...
ಅಕ್ಕಾ... ಹೇಗಿದಾಳೆ..? ಅಂದಾಗ ಮಾತ್ರ ಅಮ್ಮನಿಗೆ ಸಂಭ್ರಮ ಉಕ್ಕಿ ಉಕ್ಕಿ ಹರಿಯಿತು...
ನಯನಂಗೆ ಮೂರು ತಿಂಗಳು ಕಣೆ ನೀನು ಚಿಕ್ಕಿ ಆಗ್ತೀಯಾ ಅಂತ ಅತ್ತು ಬಿಟ್ಟರು....
ಎಲ್ಲಾ ಟೆನ್ ಶನ್ ಗಳ ನಡುವೆ ಇದೊಂದೇ ಖುಶಿ ಸಮಾಚಾರ
ಸಂಕಟದ ಸಮಾಚಾರವನ್ನೆಲ್ಲಾ ನಿರಾಳವಾಗಿ ಹೇಳಿದ ಅಮ್ಮ ಸಂತೋಶದ ಸಮಾಚಾರ ಹೇಳುವಾಗ ಬಿಕ್ಕಿದ್ದು ನಿಶಿಗೆ ಮೋಜೆನ್ನಿಸಿತು


ಅಮ್ಮ ನಿಶಿ ಪ್ರತಿ ವೀಕೆಂಡು ಮನೆಗೆ ಫೋನ್ ಮಾಡಿದಾಗಲೂ ಹೇಳುವ ಮಾತುಗಳನ್ನು ಇಂದೂ ಹೇಳಿದರು
" ನಿಶಿ ಎರಡು ವರೆ ವರ್ಷವಾಯ್ತಲ್ಲೇ ನೀನು ಅಮೆರಿಕಾಕ್ಕೆ ಹೋಗಿ ನಿನ್ನ ನೋಡ್ ಬೇಕನ್ನಿಸ್ತಿದೆ ಕಣೆ
ಯಾವಾಗ ಬರ್ತೀ.. ಓದಾಗಲೀ ಅಂದಿ ಸರಿ ಕಾದೆವು ಕೆಲ್ಸ ಸಿಗಲೀ ಅಂದೆ
ಈಗ ಕೆಲಸವೂ ಸಿಕ್ಕಿತಲ್ಲಾ ಅಜ್ಜಿನೂ ನಿಶಿನ ನೋಡ್ ಬೇಕೂ ಅಂತ ಪ್ರಾಣ ಬಿಡುತ್ತೆ
ಇನ್ನೆಷ್ಟು ದಿನ ಬದುಕಿರುತ್ತಾರೋ ಅವರು ಒಮ್ಮೆ ಬಂದು ಹೋಗೇ..
ಅಪ್ಪನಿಗೂ ಈಗೀಗ ಹುಷಾರಿರುವುದಿಲ್ಲ ನಾನೊಬ್ಬಳೇ ಆಗಿ ಬಿಟ್ಟಿದ್ದೇನೆ' ಅಂದರು

ಅದಕ್ಕಿವಳು ಪ್ರತಿ ವಾರದಂತೆ ಈವಾರವೂ 'ಹೂಂ ಅಮ್ಮಾ...ಡೀಲ್ಸ್ ನೋಡ್ತಿದೀನಿ
ಟಿಕೆಟ್ ಇಷ್ಟರಲ್ಲೇ ಬುಕ್ ಮಾಡ್ತೀನಿ ನನಗೂ ನಿಮ್ಮನ್ನೆಲ್ಲಾ ನೋಡ್ಬೇಕೂ ನಿನ್ ಕೈಯಿನ ಊಟ ಮಾಡ್ಬೇಕು
ಅಕ್ಕನ ಜೊತೆ ಚೆನ್ನಾಗಿ ಊರು ಸುತ್ತಬೇಕು.. ಅಂತೆಲ್ಲಾ ಎಷ್ಟು ಅನ್ನಿಸುತ್ತೆ ಗೊತ್ತಾ ..' ಅಂತ ಉದ್ದಕ್ಕೆ ಹೇಳಿದಳು


ತಡಿ ನಯನನ್ನ ಕರೀತೀನಿ ಅಂತ ಅಮ್ಮ ಫೋನಿಗೆ ಬಿಡುವು ಕೊಟ್ಟರು

ಕಣ್ಣೊರಿಸಿಕೊಳ್ಳುತ್ತಿರಬೇಕು ಅಮ್ಮ ಅಂದುಕೊಂಡಳು ನಿಶಿ

ಅಷ್ಟರಲ್ಲಿ ನಯನ ಲೈನಿಗೆ ಬಂದಳು

ನಿಶಿ ಅಕ್ಕನನ್ನು ರೇಗಿಸಿದ್ದೂ ರೇಗಿಸಿದ್ದೇ...

ಇಬ್ಬರೂ ಚಿಕ್ಕಂದಿನಲ್ಲಿ ಗೊಂಬೆಆಟದ ಅಮ್ಮಗಳಾಗಿ ಆಡಿದ ಮಾತುಗಳನ್ನೆಲ್ಲಾ ನೆನಪಿಸಿಕೊಂಡರು
ಅಮ್ಮ ಹೊಲೆದು ಕೊಟ್ಟ ತಮ್ಮ ಬಟ್ಟೆ ಗೊಂಬೆಗಳಿಗೆ ಊಟ ಮಾಡಿಸಿದ್ದೇನೂ... ಸ್ನಾನ ಮಾಡಿಸಿದ್ದೇನೂ...
ಅದರ ಉಲ್ಲನ್ ಕೂದಲುಗಳಿಗೆ ಎಣ್ಣೆ ಹಚ್ಚಿ ತಲೆ ಬಾಚಿದ್ದೇನೂ....
ಎರಡೇ ದಿನಕ್ಕೆ ಗೊಂಬೆಗಳು ವಾಸನೆ ಬರಲಾರಂಭಿಸಿದ್ದವು!

ಸಾರು ನೀರು ಎಣ್ಣೆ ಸೋಪು ಎಲ್ಲದರ ವಿಚಿತ್ರ ಮಿಶ್ರಣದ ಹಳಸು ವಾಸನೆ ತಡಿಯಲಾರದೇ
ಇವರಿಬ್ಬರೂ ಮಲಗಿದ ಹೊತ್ತಿನಲ್ಲಿ ಅಪ್ಪ ಆ ಗೊಂಬೆಗಳನ್ನು ತಿಪ್ಪೆಗೆ ಬಿಸಾಕಿ ಬಂದಿದ್ದರು!
'ಅಯ್ಯೋ.. ನನ್ನ ಚಿನ್ನುವನ್ನು ಅಪ್ಪ ತಿಪ್ಪೆಗೆ ಹಾಕಿದರಾ...'ಅಂತ ಅಪ್ಪ ಬೇಡಾ ಅಂದರೂ ತಿಪ್ಪೆಯಿಂದ ತನ್ನ ಗೊಂಬೆ ವಾಪಸು ತರಲು ಯತ್ನಿಸಿ ಏಟು ತಿಂದಿದ್ದಳು ನಿಶಿ...
ಮಗಳಿಗೆ ಏಟು ಕೊಟ್ಟಿದ್ದಕ್ಕೆ ಮನಸ್ಸು ತಡಿಯದೇ ಅದೇ ಸಂಜೆ ಅಪ್ಪ ಇಬ್ಬರಿಗೂ
ಪ್ಲ್ಯಾಸ್ಟಿಕ್ ಗೊಂಬೆಗಳನ್ನು ತಂದುಕೊಟ್ಟು ಇವಕ್ಕೆ ಎಷ್ಟು ಬೇಕಾದ್ರೂ ಊಟ ಮಾಡಿಸಿಕೊಳ್ಳಿ ಸ್ನಾನ ಮಾಡಿಸಿಕೊಳ್ಳಿ ಅಂತ ಹೇಳಿದ್ದರು....


ಹಳೆಯ ಬಂಗಾರದ ನೆನಪುಗಳೆಲ್ಲಾ ಹೊಳೆಯಾಗಿ ಹರಿದು ಕಾಲ ದೇಶಗಳ ದೂರವನ್ನು ಕೆಲಹೊತ್ತು ಮರೆಸಿದವು

(ಮುಂದುವರೆಯುವುದು...)

2 comments:

Anonymous said...

Hello Madam
I am first time visiter to ur blog. i am verymuch touched by ur writings. that too about tornado makes me belive in human power, his struggle.
thank you very mach
Manjunath Kulkarni

ಬಾಲು said...

Munduvareyuvudu antha ide.. but 2 thingalinda munde saage illa.....

swalpa free time madi kondu dharavaahi munduvaresi. :)