Tuesday, July 29, 2008

ಬಯಲಲ್ಲಿ ನಿಂತಾಗ......(ಭಾಗ -ಎಂಟು)

ಗಾಳಿ ಘರ್ಜಿಸುತ್ತಾ ಸಿಳ್ಳು ಹಾಕುತ್ತಿತ್ತು...
ಇಡೀ ಮನೆ ಅಲುಗಾಡಲು ಶುರುವಾಯಿತು....
'Get down!'ನಾನು ಕಿರುಚಿದೆ ನಾನೂ ಜೇ ಮದ್ಯದಲ್ಲಿ ಲೀ ಮತ್ತು ಮಾರ್ಟಿನಾ ನ್ನ ಹಾಕಿಕೊಂಡು toilet bowl ಅನ್ನು ಗಟ್ಟಿಯಾಗಿ ಆತುಕೊಂಡು ತಲೆ ಬಗ್ಗಿಸಿಕೊಂಡು ಕೂತೆವು


ಮಕ್ಕಳಿಬ್ಬರಿಗೂ ಹೆದರಬೇಡಿ ದೇವರಿದ್ದಾನೆ ಅಂತ ಹೇಳಿದೆ ಆದರೆ ಆ ಕಿವಿಗಡಚಿಕ್ಕುತ್ತಿದ್ದ ಶಬ್ದದಲ್ಲಿ ನನ್ನ ಮಾತುಗಳು ಅವರಿಗೆ ಕೇಳುತ್ತದೆಂಬ ಯಾವ ಭರವಸೆಯೂ ಇರಲಿಲ್ಲ ಮಾರ್ಟಿನಾ ಕಣ್ಣು ತೆರೆಯಲು ಪ್ರಯತ್ನಿಸಿ ಒಮ್ಮೆ ರೆಪ್ಪೆ ತೆರೆದು ನೋಡಿದಳಾದರೂ ಅವಳ ಕಣ್ಣುಗಳು ಅಯಾಚಿತವಾಗಿ ಮುಚ್ಚಿಕೊಂಡವು ಆ ಆಕಾಶ ನೀಲಿ ಕಣ್ಣುಗಳಲ್ಲಿನ ಹೊಳಪು ಮಾಸಿ ಹೋಗುತ್ತಿತ್ತು ನನಗೆ ಅವಳ ಬಗ್ಗೆ ಅವಳ ಹೊಟ್ಟೆಯಲ್ಲಿರುವ ಆ ಪುಟ್ಟ ಜೀವದ ಬಗ್ಗೆ ಆತಂಕವಾಗಲು ಶುರುವಾಯಿತು...ಆದರೆ ನಾವಿದ್ದ ಪರಿಸ್ಥಿತಿಯಲ್ಲಿ ನಾನೇನು ತಾನೇ ಮಾಡಬಹುದಿತ್ತು???


ತಲೆ ಬಗ್ಗಿಸಿಕೊಂಡು ದೇವರೇ...ಕಾಪಾಡು... ಎಂದು ಪ್ರಾರ್ಥಿಸುತ್ತಿದ್ದೆ ಆದರೆ ಆ ಶಬ್ದದಲ್ಲಿ ಎನೊಂದೂ ಮಾಡಲು ಸಾಧ್ಯವಿರಲಿಲ್ಲ
ಕಿವಿ ಮುಚ್ಚಿಕೊಳ್ಳೋಣವೆಂದರೆ ಒಂದು ಕೈಯಲ್ಲಿ toilet bowl ಅನ್ನು ಇನ್ನೊಂದು ಕೈಯಲ್ಲಿ ಲೀ ಮತ್ತು ಮಾರ್ಟೀನಾ ರನ್ನು ಹಿಡಿದುಕೊಂಡಿದ್ದೆ ಕಿವಿ ಮುಚ್ಚಿಕೊಳ್ಳಬೇಕೆಂದಾಗ ಕೈ ಖಾಲಿ ಇಲ್ಲದೇ ಇರುವುದು ಎಷ್ಟು ಸಂಕಟದ ಸ್ಥಿತಿ ಎಂದು ನನಗೆ ಇಲ್ಲಿಯವರೆಗೆ ಗೊತ್ತಿರಲಿಲ್ಲ ಈ ಮುಂಚೆ ಯಾರಾದರೂ ಇಂಥದೊಂದು ಸ್ಥಿತಿಯ ಬಗ್ಗೆ ಹೇಳಿದ್ದಿದ್ದರೆ 'how silly..!' ಅಂತ ನಕ್ಕುಬಿಟ್ಟಿರುತ್ತಿದ್ದೆ ಆದರೆ ಈಗ ಹಾಗೆನ್ನುಸುತ್ತಿಲ್ಲ.....

ಧಮ್... ಧಡಮ್.. ಧಡ್.. ಧಡ್.. ಕಿರ್...ಕಿರ್‍...ಅಷ್ಟೇ...

ನಮ್ಮ ಮನೆಯ ಗೋಡೆಗಳು ಎದ್ದು ಗಾಳಿಯೊಂದಿಗೆ ಹೊರಟು ಹೋದವು...

ನನ್ನ ಇಷ್ಟು ವರ್ಷಗಳ ಶ್ರಮದ ದುಡಿಮೆ....

ನನ್ನ ಕನಸು...

ನನ್ನ ಮನೆ...

ಕ್ಷಣ ಮಾತ್ರದಲ್ಲಿ ನಮ್ಮನ್ನು ಬಿಟ್ಟು ....


ಹೊ-ರ-ಟು ಹೋ-ಯಿ-ತು

ಎಷ್ಟು ಸುಲಭವಾಗಿ ,ಏನೊಂದೂ ಭಾವನೆಗಳಿಲ್ಲದೆ ನಮ್ಮನ್ನು ಬಿಟ್ಟು ಹೊರಟು ಹೋಯಿತು.........


ಗೋಡೆಗಳಿಗೆ ಭಾವನೆಗಳಿರುತ್ತದೆಯೇ ಅಂತ ನೀವು ನನ್ನನ್ನು ಕೇಳಬಹುದು ಕಷ್ಟ ಪಟ್ಟು ಕಣ ಕಣ ಕೂಡಿಸಿ ಮನೆ ಕಟ್ಟಿದ ಯಾವುದೇ ವ್ಯಕ್ತಿಯನ್ನು ಕೇಳಿ ನನ್ನ ಮಾತು ನಿಜ ಎಂದೇ ಹೇಳುತ್ತಾನೆ...



ಕೊರೆವ ಗಾಳಿ ಮುಖಕ್ಕೆ ರಾಚುತ್ತಿತ್ತು ನಾನು ನನ್ನ ಕೈಗಳಿಗೆ ನನ್ನೆಲ್ಲಾ ಶಕ್ತಿ ಹರಿಸಲು ಪ್ರಯತ್ನಿಸುತ್ತಾ ಮುಖ ಇನ್ನೂ ಕೆಳಗೆ ಹುದುಗಿಸಿದೆ ಇದ್ದಕ್ಕಿದ್ದಂತೆ ಜೋರಾಗಿ ಓಡುವ ಟ್ರೈನ್ ಒಂದು ನನ್ನ ಮೇಲೆಯೇ ಹಾದು ಹೋದಂತಾಯಿತು.

ನನ್ನ ಕೈಗಳು ತಡವರಿಸಿದವು.......

ಕಣ್ಣು ಕುರುಡಾಯಿತು.....

ಲೀ ಜೋರಾಗಿ ಕಿರುಚಿದ್ದು ಆ ಸದ್ದಿನಲ್ಲೂ ಕೇಳಿಸಿತು.....


toilet tank ಮೇಲೆದ್ದು ಹಾರಿ ಹೋಗಿದ್ದು ಗೊತ್ತಾಯಿತು 'Lord! Protect my children! Protect Martina..." ನಾನು ನೆಲಕ್ಕೆ ತಲೆ ಬಾಗಿಸಿಕೊಂಡು ಪ್ರಾರ್ಥಿಸುತ್ತಿದ್ದೆ.....

ಕಣ್ಣೀರು ಕೆನ್ನೆಮೇಲೆ ಉರುಳುತ್ತಿರುವುದು ಗೊತ್ತಾಗುತ್ತಿತ್ತು
ತಲೆ ಗಿರ್ರ್ ಎಂದು ತಿರುಗುತ್ತಿತ್ತು......

ಹಾಗೆ ಎಷ್ಟು ಹೊತ್ತು ಇದ್ದೆವು...? ಹತ್ತು ನಿಮಿಷ? ಇಪ್ಪತ್ತು ನಿಮಿಷ? ಸಮಯದ ಲೆಕ್ಕ ಕಳೆದು ಹೋಗಿತ್ತು ನನಗಂತೂ ಪ್ರತಿ ನಿಮಿಷವೂ ಘೋರವಾಗಿ ನನ್ನನ್ನು ಇರಿಯುತ್ತಿರುವಂತೆ ಅನ್ನಿಸುತ್ತಿತ್ತು ನನ್ನ ಜೀವನದ ಅತಿ ಸಂಕಟದ, ಅತಿ ನಿಧಾನವಾಗಿ ಕಳೆದ ಗಳಿಗೆಗಳವು

ನಿಧಾನವಾಗಿ ಗಾಳಿ ತನ್ನ ದಿಕ್ಕು ಬದಲಿಸಿತು....
ಮತ್ತೆ ಹತ್ತು ನಿಮಿಷ ಕಳೆಯಿತು ನಾವೆಲ್ಲಾ ಹಾಗೇ ತಲೆ ಬಗ್ಗಿಸಿಕೊಂಡೇ ಕೂತಿದ್ದೆವು
ಗಾಳಿ ಮೆಲ್ಲ ಮೆಲ್ಲಗೆ ಬೀಸುತ್ತಾ ಜೋಗುಳ ಹಾಡಲಾರಂಭಿಸಿತು....

*********
ನಾವು ದಟ್ಟದರಿದ್ರರಾಗಿ ಬಟ್ಟ ಬಯಲಿನಲ್ಲಿ ನಿಂತಿದ್ದೆವು....

(ಮುಂದುವರೆಯುವುದು...)

No comments: