ಕೆಂಪು ಜೆರೇನಿಯಮ್...
ಮತ್ತೆ ಅಜ್ಜಿಯ ನೆನಪು...
ನನ್ನ ಅಂಗಳದಲ್ಲಿ ಕೆಂಪು ಜೆರೇನಿಯಮ್ ಬೇಕೇ ಬೇಕೆನ್ನಿಸಿತು
ಸಾಲು ಸಾಲಾಗಿ ಅಜ್ಜಿ ತೂಗುಬಿಟ್ಟಂತೆ...
ಹುಚ್ಚು ಹತ್ತಿದವಳಂತೆ ಒಂದಲ್ಲ ಎರಡಲ್ಲ ಐದು ಕೆಂಪು ಜೆರೇನಿಯಮ್ ತೂಗುಬುಟ್ಟಿಗಳನ್ನು ಖರೀದಿಸಿದೆ ಲೀ ದಂಗಾಗಿ ನೋಡುತ್ತಿದ್ದ ಕಾರಿಗೆ ವಾಪಸ್ಸಾಗಿ ಮನೆಗೆ ಬರುವಾಗ ಲೀ ಗೆ ಅಜ್ಜಿ ಮತ್ತು ಕೆಂಪು ಜೆರೇನಿಯಮ್ ಬಗ್ಗೆ ಹೇಳಿದೆ...
*********
ಅಜ್ಜಿ ಆಗ ಸುಮಾರು ಹದಿನೈದು ಹದಿನಾರು ವರ್ಷದವಳು. ಅವಳಿಗಾಗಲೇ ಮದುವೆಯಾಗಿತ್ತು ಇಬ್ಬರು ಮಕ್ಕಳೂ ಇದ್ದರು
ಎರಡು ವರ್ಷದ ಜೇಮ್ಸ್ ಇನ್ನೊಂದು ವರುಷವೂ ತುಂಬದ ಮಗು. ಅಜ್ಜನಿಗೂ ಇಪ್ಪತ್ತರ ಹುರುಪು ಜೊತೆಗಾರರು ಪಶ್ಚಿಮಕ್ಕೆ ಭವ್ಯ ಭವಿಷ್ಯವನ್ನು ಅರಸಿ ಹೊರಟಾಗ ತಾನೂ ಹೊರಟ. ಅಜ್ಜಿ ಹುಟ್ಟಿ ಬೆಳೆದ ವಿಸ್ಕಾನ್ಸಿನ್ ಬಿಟ್ಟು ಮಕ್ಕಳೊಂದಿಗೆ ಮುಚ್ಚಿದ ಬಂಡಿಯಲ್ಲಿ ಅಜ್ಜನೊಂದಿಗೆ ಹೊರಟಳು.ಕಣ್ಣಲ್ಲಿ ಕನಸೇನೋ ಇತ್ತು ನಾಳೆಗಳು ಹೇಗೆಂದು ಗೊತ್ತಿರಲಿಲ್ಲ ಪಯಣದ ಗಮ್ಯ ಯಾವುದೆಂದೂ ಗೊತ್ತಿರಲಿಲ್ಲ.ಮತ್ತೆಂದು ತನ್ನವರನ್ನು ನೋಡುವೆನೋ ಇಲ್ಲವೋ ಎಂದೂ ತಿಳಿದಿರಲಿಲ್ಲ ಆದರೂ ಹೊರಟಳು...
ವಿಸ್ಕಾನಿನ್ನಿನಿಂದ ಮಿನ್ನೆಸೋಟ,ಮಿನ್ನೆಸೋಟ ದಿಂದ ಕೆಳಗೆ ಅಯೋವ...ಅಯೋವ ದಿಂದ ಮತ್ತೂ ಕೆಳಗೆ ಮಿಸ್ಸೋರಿ...ಕೊನೆಗೆ ಮುಟ್ಟಿದ್ದು ಕ್ಯಾನ್ಸಾಸ್...
ಕೆಟ್ಟಹವಾ....
ಎಷ್ಟೊದಿನ ಉಪವಾಸ...
ಹದಗೆಟ್ಟ ಆರೋಗ್ಯ...
ಚಳಿಯ ದಿನಗಳಲ್ಲಿ ಪ್ರಯಾಣ ಮಾಡಲಾಗುತ್ತಿರಲಿಲ್ಲ...ಹಿಮಪಾತಗಳಾಗುತ್ತಿದ್ದರೆ ಕುದುರೆಗಳು ನಡೆಯುವುದಿರಲಿ ಸತ್ತೇ ಹೋಗುತ್ತಿದ್ದವು ಇನ್ನೊಂದು ಜೊತೆ ಕುದುರೆ ಕೊಳ್ಳಲು, ಬ್ರೆಡ್ ಗಿಣ್ಣು ಕೊಳ್ಳಲು ಅದಕ್ಕಾಗಿ ಹಣ ಗಳಿಸಲು ಅಲ್ಲಲ್ಲಿ ಕೊಂಚ ಕಾಲ ನಿಲ್ಲಬೇಕಾಗುತ್ತಿತ್ತು. ಎಷ್ಟೊ ಸಾರಿ ಕೆಟ್ಟ ಹವೆಯಿಂದಾಗಿ ತಿಂಗಳುಗಟ್ಟಲೆ ಪ್ರಯಾಣ ಮುಂದೂಡ ಬೇಕಾಗಿ ಬರುತ್ತಿತ್ತು.ಒಮ್ಮೆ ಎಲ್ಲರಿಗೂ ವಿಷಮ ಶೀತ ಜ್ವರ ಬಂತು...ಪುಟ್ಟಕೂಸು ಬದುಕುಳಿಯಲಿಲ್ಲ...ಅಜ್ಜಿ ಕಂಗೆಟ್ಟು ಕುಸಿದು ಹೋದಳು
ಕ್ರೂರ ಚಳಿಗಾಲದಲ್ಲಿ ಪ್ಲಂ ಕ್ರೀಕಿನ ಬಳಿ ಅವರು ಕೆಲಕಾಲ ಇರಬೇಕಾಯ್ತು ಅಜ್ಜ ಹಣಗಳಿಸಲು ಹತ್ತಿರದ ಪಟ್ಟಣದಲ್ಲಿ ಮರಗೆಲಸ ಮಾಡುತ್ತಿದ್ದ ಪಟ್ಟಣದ ಬಾಡಿಗೆ ಮನೆ ಇವರ ಕೈಗೆಟುಕದು ಆದರೆ ವಿಶಾಲ ಪ್ರಯರಿಯಲ್ಲಿ ನಾಗರೀಕತೆಯಿಂದ ದೂರವಾಗಿ ಹುಲ್ಲುಹೆಪ್ಪಿನ ಮನೆ (sod house) ಕಟ್ಟಲು ಒಂದು ಪೆನ್ನಿಯನ್ನೂ ಖರ್ಚು ಮಾಡಬೇಕಾಗಿರಲ್ಲಿಲ್ಲ...
ಗಾಳಿ ಸುಳಿಯದ ಆ ಮನೆ ...
ಒಳಗೆ ಮಂದ ಬೆಳಕು...
ತೇವದ ವಾಸನೆ...
ಕೆಲವುಸಾರಿ ಹಿಮಮಾರುತ ಬಂದಾಗ ಪಟ್ಟಣದಿಂದ ನಡೇದು ಬರುವುದು ಅಪಾಯಕಾರಿಯೆಂದು ಮೂರು ನಾಲ್ಕು ದಿನ ಅಜ್ಜ ಮನೆಗೆ ಬರಲಾಗುತ್ತಿರಲಿಲ್ಲ ಹತ್ತಾರು ದಿನಗಳ ಹಿಮಮಾರುತಗಳೂ ಬರುತ್ತಿದ್ದವು ತಾನು ಅರೆ ಹೊಟ್ಟೆ ತಿಂದು ಸದಾ ಕೆಮ್ಮುವ ಜೇಮ್ಸ್ ನನ್ನು ಹಿಡಿದು...
ಆತಂಕದ ದಿನ ರಾತ್ರಿಗಳು...
ದಿನಕ್ಕೂ ರಾತ್ರಿಗೂ ಅಂಥಾ ವ್ಯತ್ಯಾಸವೇನೂ ಇರುತ್ತಿರಲಿಲ್ಲ ಮಧ್ಯಾನ್ಹ ಕ್ಕೇ ಕತ್ತಲಾದರೆ ಮತ್ತೆ ಬೆಳಕಾಗುವುದು ಯಾವಾಗಲೋ...
ಅವರ ಹುಲ್ಲು ಹೆಪ್ಪಿನ ಮನೆಯಲ್ಲಿ ಅಜ್ಜಿ ಆ ನೀರವದಲ್ಲಿ ಒಬ್ಬಳೇ ಜೇಮ್ಸ್ನ್ ನೊಂದಿಗೆ ಹಲವಾರು ದಿನಕಳೆದಳು...
ಮಂಕು ಹಗಲುಗಳು...
ಭಯಾನಕ ರಾತ್ರಿಗಳು...
ತೋಳಗಳ ಊಳಿಡುವಿಕೆ...
ಮಂಕು ಆಕಾಶ...
ಚೈತನ್ಯವಿಲ್ಲದ ನೆಲ...
ಕಿತ್ತು ತಿನ್ನುವ ಒಂಟಿತನ....
ಆ ದಿನಗಳಲ್ಲಿ ಕಡು ಗೆಂಪು ಹೂವಿನ ಜೆರೇನಿಯಮ್ ಹೂವಿನ ಪುಟ್ಟ ಕುಂಡವೊಂದನ್ನು ಜೇಮ್ಸ್ ನನ್ನು ನೋಡಲು ದೂರದಿಂದ ಬಂದಿದ್ದ ಗೆಳತಿಯೊಬ್ಬಳು ಅಜ್ಜಿಗೆ ಉಡುಗೊರೆಯಾಗಿ ನೀಡಿದಳಂತೆ ತನ್ನ ಮನಕ್ಕೆ ಚೇತನ ತುಂಬಲು ತನ್ನ ಅಂಗಳಕ್ಕೆ ಇಳಿದು ಬಂದ ಏಂಜಲ್ ಈ ಕೆಂಪು ಜೆರೇನಿಯಮ್ ಅನ್ನಿಸಿತಂತೆ ಅಜ್ಜಿಗೆ...
ಮುಂದೆ ಅಜ್ಜಿ ಕ್ಯಾನ್ಸಾಸ್ ನಲ್ಲಿ ನೆಲೆ ನಿಂತ ಮೇಲೆ ಪ್ರತಿ ಫಾಲ್ ನಲ್ಲಿ ಹಲವಾರು ಪುಟ್ಟ ಕುಂಡಗಳಲ್ಲಿ ಕೆಂಪು ಜೆರೇನಿಯಮ್ ಬೆಳೆಸುತ್ತಿದ್ದಳು ತನ್ನ ಹತ್ತಿರದವರಿಗೆಲ್ಲಾ ಹಂಚುತ್ತಿದ್ದಳು ನನಗೂ ಹಲವು ಬಾರಿ ಕೊಟ್ಟಿದ್ದಳು ಪ್ರತಿ ಸಾರಿ ನನಗೆ ಕೊಡುವಾಗ ನಸು ನಕ್ಕು ನನಗೆ ಹೇಳುತ್ತಿದ್ದಳು 'ಈ ಹೂಗಳಲ್ಲಿ ನನ್ನ ಇಲ್ಲವಾದ ಪುಟ್ಟ ಮಗಳ ಮುಖವೇ ಕಾಣುತ್ತೆ ನನಗೆ...ಅವಳೂ ಹೀಗೇ ಇದ್ದಳು ಈ ಜೆರೇನಿಯಮ್ ಅಷ್ಟೇ ಮುದ್ದಾಗಿ...ಇದರಷ್ಟೇ ಬ್ರೈಟ್ ಆಗಿ...ಇಷ್ಟೇ ಪ್ರಾಮಿಸಿಂಗ್ ಆಗಿ...
ಅವಳನ್ನು ನೆನೆದು ದುಃಖ ಪಡುವುದಿಲ್ಲ ನಾನು ಅದು ಅವಳು ನನಗೆ ಕೊಟ್ಟ ಸುಖದ ಘಳಿಗೆ ಗಳಿಗೆ ನಾನು ಮಾಡುವ ಅವಮಾನವಾಗುತ್ತೆ...ಕಷ್ಟದ ದಿನಗಳನ್ನು ನಾನು ಯಶಸ್ವಿಯಾಗಿ ಗೆದ್ದು ಬಂದ ನೆನಪಿಗೆ ನಾನು ಈ ಜೆರೇನಿಯಮ್ ಅನ್ನು ಮುಡುಪಾಗಿಸಿದ್ದೇನೆ ಈ ಕೆಂಪು ದಳಗಳು...ಈ ಮೂಳೆ ಕೊರೆಯುವ ಚಳೀಯಲ್ಲೂ ಅರಳುತ್ತೀನೆಂಬ ಇವುಗಳ ಹಟದಂತೆ ಕಾಣುವ ಹುರುಪು...ಇದು ನನಗೆ ಒಂದೊಮ್ಮೆ ಬದುಕಲು ಶಕ್ತಿ ಬೆಳಕು ಕೊಟ್ಟಿತ್ತು ಆ ಬೆಳಕನ್ನು ನಾನು ಪಸರಿಸಲು ಯತ್ನಿಸುತ್ತಿದ್ದೇನೆ ಅಷ್ಟೇ....
**************
ಲೀ ಕಣ್ಣಲ್ಲಿ ನೀರೂರಿತ್ತು ನನ್ನ ಮನವೂ ಅಜ್ಜಿಯ ನೆನಪಿಂದ ಭಾರವಾಗಿತ್ತು...
(ಮುಂದುವರೆಯುವುದು...)
ಟಿಪ್ಪಣಿ-
1812ರ ಅಮೆರಿಕನ್ ಯುದ್ದದ ನಂತರ ಬಹಳಷ್ಟು ಜನ ಅಮೆರಿಕನ್ನರು ಹೊಸಜೀವನ ಅರಸಿ ಪೂರ್ವದಿಂದ ಪಶ್ಚಿಮದ ಕಡೆಗೆ ವಲಸೆ ಬಂದರು.ಹವಾಮಾನ ವೈಪರೀತ್ಯಗಳಲ್ಲದೇ, ಪ್ರಯಾಣಕ್ಕೆ ಆಧುನಿಕ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಈ ರೀತಿಯ ಸಾಹಸ ಸಾಕಷ್ಟು ರೋಮಾಂಚಕವಾಗಿತ್ತಾದರೂ, ಅಪಾಯಕಾರಿಯಾಗಿಯೂ ಇತ್ತು. ಸಾವಿರಾರು ಜನ ಗುರಿ ತಲುಪುವ ಮುನ್ನವೇ ಪ್ರಾಣ ತೆತ್ತರು ಈ ರೀತಿ ಗುರಿ ತಲುಪಿದ ವೀರರ ಸಾಹಸ ನೆನೆದು ಸ್ಪೂರ್ತಿ ಪಡೆಯುವುದು,ಗುರಿ ತಲುಪದ ಅಮಾಯಕರ ತ್ಯಾಗವನ್ನು ಸ್ಮರಿಸುವುದು ಅಮೆರಿಕನ್ನರಿಗೆ ಯಾವತ್ತಿಗೂ ಪ್ರಿಯವಾದ ಕೆಲಸ.ಇವರನ್ನು "ಪಯೋನೀರ್ಸ್" ಅಂತ ವಿಶೇಷ
ವಾಗಿ ಗುರುತಿಸಿ ಗೌರವಿಸಲಾರುತ್ತೆ. ಅಂಥಾ ಒಂದು ಪಯೋನೀರ್ ಮಹಿಳೆಯಾಗಿ ನಾನು ಇಲ್ಲಿನ ಅಜ್ಜಿಯನ್ನು ಚಿತ್ರಿಸಲು
ಪ್ರಯತ್ನಿಸಿದ್ದೇನೆ
1 comment:
ಅಜ್ಜಿ, ಕೆಂಪು ಜಿರೇನಿಯಮ್, ವಲಸೆ, ಛಳಿ, ನೋವು, ಒಂಟಿತನ... ಇವೆಲ್ಲ ನಮ್ಮದೇ ಬಾಳಿನ ಪುಟಗಳು. ಹೆಸರುಗಳು ಮಾತ್ರ ಬೇರೆ ಬೇರೆ. ತಟ್ಟಿತು.
Post a Comment